ಬೆಂಗಳೂರು: ಕಳಸಾ ಬಂಡೂರಿ ಹೋರಾಟಗಾರರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಸವದತ್ತಿ ಮೂಲದ ಗದಿಗೆಮ್ಮ ಸೇರಿ ಮೂವರು ಮಹಿಳೆಯರು ತೀವ್ರ ಜ್ವರದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಮೂಲ ಸೌಕರ್ಯಗಳಿಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ.
ಮಳೆಯಲ್ಲೂ ಟಾರ್ಪಲ್ ಹಿಡಿದು ರೈತರು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಸ್ಥಳಕ್ಕೆ ಬಾರದ ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗೋ ತನಕ ಇಲ್ಲಿಂದ ಹೋಗೋ ಪ್ರಶ್ನೆಯೇ ಇಲ್ಲ ಅಂತ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ರಾತ್ರಿ ಕೂಡ ಮಹಿಳೆಯರು, ಮಕ್ಕಳು, ವಯಸ್ಸಾದವರು, ಕೊರೆವ ಚಳಿಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿದರು.
ಕೆಲ ವಯಸ್ಸಾದ ಮಹಿಳಾ ಹೋರಾಟಗಾರರು ಹೊದಿಕೆಯಿಲ್ಲದೆ ಚಳಿಯಲ್ಲೇ ರೈಲ್ವೆ ನಿಲ್ದಾಣದಲ್ಲಿ ನಿದ್ದೆ ಮಾಡಿದ್ದಾರೆ. ಇಂದಾದರೂ ರಾಜ್ಯಪಾಲರನ್ನ ಭೇಟಿ ಮಾಡಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ.