ಮಂಗಳೂರು: ಹೊಸ ವರ್ಷದ ಪ್ರಯುಕ್ತ ಎಲ್ಲರು ಪಾರ್ಟಿ, ಸುತ್ತಾಟ ಮಾಡುತ್ತಿದ್ದರೆ, ಬೆಂಗಳೂರಿನ ಕುಟುಂಬವೊಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಿ ಮಂಜುನಾಥನ ಸೇವೆ ಸಲ್ಲಿಸಿದ್ದಾರೆ.
ಹೊಸ ವರ್ಷಾಚರಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ ಪ್ರಯುಕ್ತ ಬೆಂಗಳೂರಿನ ಕುಟುಂಬವೊಂದು ಕಳೆದ 12 ವರ್ಷಗಳಿಂದ ಸ್ವಾಮಿ ಸನ್ನಿಧಾನದಲ್ಲಿ ಹೂವಿನ ಅಲಂಕಾರ ಸೇವೆ ಮಾಡುತ್ತಿದ್ದು, ಈ ವರ್ಷವೂ ವಿಶೇಷವಾಗಿ ಅಲಂಕಾರ ಮಾಡಿದೆ.
Advertisement
Advertisement
ಬೆಂಗಳೂರಿನ ಚಂದ್ರಲೇಔಟ್ ನಿವಾಸಿಗಳಾದ ಸಾಯಿ ಶರವಣ, ಎಸ್. ಗೋಪಾಲ್ ರಾವ್, ಮಂಜುನಾಥ ರಾವ್, ಆನಂದ್ ಜೊತೆಗೂಡಿ ಕಳೆದ 20 ವರ್ಷಗಳಿಂದ ಹೊಸ ವರ್ಷಕ್ಕೆ ಮಂಜುನಾಥನ ದರ್ಶನ ಪಡೆಯಲು ಆಗಮಿಸುತ್ತಿದ್ದರು. ಈ ನಡುವೆ ಕಳೆದ 12 ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೂವಿನ ಅಲಂಕಾರ ಮಾಡಿ ಹೊಸ ವರ್ಷವನ್ನು ದೇವರ ಸೇವೆಗಾಗಿ ಮೀಸಲಿಡುತ್ತಿದ್ದಾರೆ.
Advertisement
ಹಣ್ಣುಗಳಾದ ದಾಳಿಂಬೆ, ಅನಾನಸು ಸೇರಿದಂತೆ ಭತ್ತದ ತೆನೆ, ಕಬ್ಬು, ತೆಂಗಿನ ಗರಿ, ಬಾಳೆ ದಿಂಡು, ತಾವರೆ, ಲಿಲಿಯಂ, ಜಮೈಕಾನ್ ಎಲೆ, ಆಂತೂರಿಯಂ, ಕ್ರಿಸಾಂಟಮೊ ಸಹಿತ 6 ಲೋಡ್ ಅಲಂಕಾರಿಕ ಸಾಮಾಗ್ರಿಗಳನ್ನು ಬಳಸಿ ದೇವಸ್ಥಾನದ ಹೊರಾಂಗಣದ ದ್ವಾರ, ಸುತ್ತು ಪೌಳಿ, ಛಾವಣಿ ಸ್ತಂಭಗಳನ್ನು ವಿಭಿನ್ನವಾಗಿ ಆಕರ್ಷಕವಾಗಿ ಸಿಂಗರಿಸಲಾಗಿದೆ.
Advertisement
ಹೊಸ ವರ್ಷವನ್ನು ಆಚರಿಸಲು ದೇವರ ಮೊರೆ ಹೋಗಬೇಕೆಂಬ ಸಂಕಲ್ಪದೊಂದಿಗೆ ಕಳೆದ 12 ವರ್ಷಗಳಿಂದ ಮಂಜುನಾಥ ಸ್ವಾಮಿಯ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಸೇವಾಕರ್ತರಾದ ಎಸ್ ಗೋಪಾಲ್ ರಾವ್ ಹೇಳಿದ್ದಾರೆ.