– ಹೆಣಗಳ ಮಧ್ಯೆ ಮೂರು ದಿನ ಕಳೆದ 3 ವರ್ಷದ ಬಾಲೆ
ಬೆಂಗಳೂರು: ಕೌಟುಂಬಿಕ ಕಲಹದಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪುಟ್ಟ ಮಗುವನ್ನು ಕೊಂದ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ತಿಗಳರಪಾಳ್ಯದಲ್ಲಿ ವಾಸವಿದ್ದ ಶಾಸಕರ ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಅಕಾಲಿಕ ಸಾವು ಕಂಡಿದ್ದಾರೆ. ಮೃತರನ್ನು ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27), ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಿಂಚನ ಮಗಳು ಬದುಕುಳಿದಿದ್ದಾಳೆ.
ಮೂರು ನಾಲ್ಕು ದಿನಗಳ ಹಿಂದೆ ಬ್ಯಾಡರ್ ಹಳ್ಳಿಯ ಚೇತನ್ ಸರ್ಕಲ್ 4 ಕ್ರಾಸ್ ನಲ್ಲಿರೋ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಆದರೆ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಪ್ರತಿದಿನ ಗಲಾಟೆ ಆಗುತ್ತಿತ್ತು.ಹೀಗೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಶಂಕರ್ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟಿದ್ದರು. ಇದರಿಂದ ಮನನೊಂದ ಶಂಕರ್ ಪತ್ನಿ, ಪುತ್ರ, ಇಬ್ಬರು ಹೆಣ್ಣುಮಕ್ಕಳು ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಸಿಂಧೂರಾಣಿಯ 9 ತಿಂಗಳ ಹಸುಗೂಸನ್ನು ಕೊಂದಿದ್ದಾರೆ.
ಬದುಕುಳಿದ ಕಂದಮ್ಮ..!
ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅದರಲ್ಲಿ 3 ವರ್ಷದ ಹೆಣ್ಣು ಮಗು ಅದೃಷ್ಟವಶಾತ್ ಪಾರಾಗಿದೆ. ಈ ಮಗು ಮೂರು ದಿನಗಳ ಕಾಲ ಹೆಣಗಳ ನಡುವೆ ಇತ್ತು. ಅನ್ನ ನೀರು ಇಲ್ಲದೇ ಸಾವಿನ ಮನೆಯಲ್ಲೇ ಮಗು ಇತ್ತು. ಸದ್ಯ ಆತ್ಮಹತ್ಯೆ ಸ್ಥಳದಲ್ಲಿಂದ ಮಗುವಿನ ರಕ್ಷಣೆ ಮಾಡಲಾಗಿದ್ದು, ಅಲ್ಲೇ ಸಮೀಪದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ
ಘಟನೆಯ ಬಗ್ಗೆ ಡಿಸಿಪಿ ಸಂಜೀವ್ ಎಂ ಪಾಟೀಲ್ ಮಾತನಾಡಿ, ಈ ಮನೆಯಲ್ಲಿರುವವರು ಕಳೆದ ಮೂರು ನಾಲ್ಕು ದಿನಗಳಿಂದ ಫೋನ್ ರೀಸಿವ್ ಮಾಡತ್ತಿಲ್ಲ ಎಂದು ಇಂದು ಸಾಯಂಕಾಲ ಪೋಲೀಸ್ ಠಾಣೆಗೆ ಸ್ಥಳೀಯರಿಂದ ಕರೆ ಬಂದಿದೆ. ಬಂದು ಕಿಟಕಿ ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಐದು ಮೃತ ದೇಹ ಪತ್ತೆಯಾಗಿದೆ, ಅದರಲ್ಲಿ ಒಂದು ಮಗು ಇನ್ನೂ ನಾಲ್ಕು ವಯಸ್ಕರ ಮೃತ ದೇಹ ಪತ್ತೆಯಾಗಿದೆ. ಒಂದು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳದಲ್ಲಿ ಶೋಧ ನಡೆಯುತ್ತಿದೆ. ಇನ್ನೂ ಘಟನೆ ಯಾವ ಕಾರಣಕ್ಕೆ ಆಗಿದೆ ಅಂತಾ ತನಿಖೆ ನಡೆಸುತ್ತಿದ್ದೇವೆ ಎಂದರು.
ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.