ಬೆಂಗಳೂರು: ಮದುವೆ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ ಶಿವರಾಜುರವರು ಧೈರ್ಯ ತುಂಬಿ ಪರೀಕ್ಷೆ ಮುಗಿಯುವರೆಗೂ ಸ್ಥಳದಲ್ಲೇ ಇದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ವಿ.ವಿ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರ ಏಮ್ಸ್ ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಜ.30 ರಂದು ಪರೀಕ್ಷೆ ದಿನವೇ ವಿದ್ಯಾರ್ಥಿನಿಯೋರ್ವಳ ಮದುವೆ ಸಹ ನಡೆದಿತ್ತು. ಮದುವೆಯ ಮುಹೂರ್ತ ಕಾರ್ಯ ಮುಗಿಯುತ್ತಿದ್ದಂತೆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಬಂದಿದ್ದಾರೆ. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಮದುಮಗಳಿಗೆ ಸ್ವತಃ ಕುಲಸಚಿವರೇ ಧೈರ್ಯ ತುಂಬಿ ಆಕೆಯ ಆತಂಕವನ್ನು ದೂರವಾಗಿಸಿ ಪರೀಕ್ಷೆ ಮುಗಿಯುವವರೆಗೆ ಅಲ್ಲಿಯೇ ಹಾಜರಿದ್ದು ಉದಾರತೆ ಮೆರೆದಿದ್ದಾರೆ.
ಪರೀಕ್ಷೆ ಬರೆಯುತ್ತಿದ್ದ ನವವಧುವಿನ ಪತಿಯೂ ಸಹ ಆಕೆ ಪರೀಕ್ಷೆ ಬರೆದು ಮುಗಿಯುವವರೆಗೂ ಸಹ ಕಾಲೇಜಿನ ಹೊರಗೆ ಕುಳಿತು ಆಕೆಯ ಶೈಕ್ಷಣಿಕ ಪರೀಕ್ಷೆಗೆ ಪ್ರೋತ್ಸಾಹ ನೀಡಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರು ವಿವಿಯ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರೋ. ಶಿವರಾಜುರವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.