ಬೆಂಗಳೂರು: ಈ ಹಿಂದೆ ನಾವು ವೀರಶೈವ ಒಳಗೊಂಡಂತೆ 99 ಉಪ ಪಂಗಡಗಳನ್ನು ಸೇರಿಸಿ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕೇಳಿದ್ದೆವು. ಮುಂದಿನ ಚುನಾವಣೆ ನಂತರ ನಾವೆಲ್ಲ ಒಗ್ಗೂಡಿ ಮುನ್ನಡೆಯುತ್ತೇವೆ ಎಂದು ಹೇಳಿದ್ದೆ. ಇಲ್ಲಿ ಪ್ರತ್ಯೇಕ ಹೋರಾಟ, ಕೂಗು ಈ ಶಬ್ದಗಳನ್ನು ನಾನು ಬಳಸಿಯೇ ಇಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಂಚೆ ಮಾಡಿದರೆ ಇದಕ್ಕೆ ಮತ್ತೆ ರಾಜಕೀಯ ಬಣ್ಣ ನೀಡಿ, ಅಪಪ್ರಚಾರ ಮಾಡುತ್ತಾರೆ. ಈ ಕಾರಣಕ್ಕೆ ಬರುವ ಚುನಾವಣೆ ನಂತರದಲ್ಲಿ ನಾವು ಪಂಚಪೀಠಾಧಿಶರು, ವೀರಕ್ತಮಠಗಳು, ವೀರಶೈವ ಮಹಾಸಭಾ, ಜಾಗತೀಕ ಲಿಂಗಾಯತ ಮಹಾಸಭಾ ಕೂಡಿ ಚರ್ಚೆ ಮಾಡಿ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಮುಂದುವರೆಯುತ್ತೇವೆ ಎಂದು ಬೆಂಗಳೂರಿನಲ್ಲಿ ಹೇಳಿದ್ದೆ. ಈಗ ನಾವು ಒಂದಾಗುವಾಗ ಅಥವಾ ಒಂದಾದರೆ ಇದು ಯಾರಿಗೆ ಮತ್ತು ಏಕೆ ಸಮಸ್ಯೆ ಎಂದು ಪ್ರಶ್ನಿಸಿದರು.
Advertisement
Advertisement
ನಾನು ಚುನಾವಣೆ ನಂತರ ಎಂದು ಹೇಳಿದ್ದನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಬಿಂಬಿಸಿದ್ದರಿಂದ ಬೇರೆ ಸಂದೇಶ ಹೋಗಿದೆ. ಈಗ ಯಾವುದೇ ಹೋರಾಟ, ಕೂಗು ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮಲ್ಲಿನ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಒಳ್ಳೆಯದಾಗಬೇಕು. ಸಮಾಜದ ಮಠಗಳು, ಶಿಕ್ಷಣ ಸಂಸ್ಥೆಗಳಿಗೂ ಒಳಿತಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಠದ ಎಲ್ಲಾ ಶ್ರೀಗಳು, ಪಂಚಪೀಠಾಧೀಶರು, ವೀರಶೈವ ಮಹಾಸಭೆ, ಜಾಗತೀಕ ಲಿಂಗಾಯತ ಮಹಾಸಭಾ ಸೇರಿದಂತೆ ಸಮಾಜದ ಎಲ್ಲ ಗಣ್ಯರನ್ನು ಒಳಗೊಂಡು ಸಮಾಜಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
Advertisement
ಸಾಮೂಹಿಕ ನಾಯಕತ್ವ:
ಈ ವಿಚಾರದಲ್ಲಿ ನಾನು ನಾಯಕತ್ವ ವಹಿಸುವುದಿಲ್ಲ. ನಾನು ಎರಡು ಹೆಜ್ಜೆ ಹಿಂದಿಟ್ಟು, ಸಾಮೂಹಿಕ ನಾಯಕತ್ವದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೂ ಗೊತ್ತಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
Advertisement
ನಾವು ಹಿಂದೆ ಹೋರಾಟ ಮಾಡಿದ್ದಾಗ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ, ಅಲ್ಪಸಂಖ್ಯಾತರ ಸ್ಥಾನಮಾನ, ಇತರೆ ಸೌಲಭ್ಯಗಳು ಸಿಗುತ್ತಿದ್ದವು. ಎಂಜಿನಿಯರಿಂಗ್, ಮೆಡಿಕಲ್ ಮತ್ತು ಡೆಂಟಲ್ ಶಿಕ್ಷಣದಲ್ಲಿ ಶೇ.50ರಷ್ಟು ಮೀಸಲಾತಿ ಸಿಗುತ್ತಿತ್ತು. ಯುಪಿಎಸ್‍ಸಿ ಯಿಂದ ಕೆಪಿಎಸ್‍ಸಿ ಯವರಿಗೆ ಕೇಂದ್ರದಿಂದ ರಾಜ್ಯದವರೆಗೆ ಉದ್ಯೋಗಗಳಲ್ಲಿ ಮೀಸಲಾತಿ ದೊರಕುತಿತ್ತು. ಆದರೆ ಅಂದು ಸಮಯದ ಅಭಾವದಿಂದ ಮತ್ತು ಗಡಿಬಿಡಿಯಲ್ಲಿ ನಮ್ಮಿಂದಲೂ ಸಣ್ಣ ಪುಟ್ಟ ಲೋಪದೋಷದಿಂದ ಆ ಕೆಲಸ ಆಗಲಿಲ್ಲ. ಅಂದು ಚುನಾವಣೆ ಹತ್ತಿರವಿದ್ದ ಸಂದರ್ಭದಲ್ಲಿ ಇದಕ್ಕೆ ರಾಜಕೀಯ ಬಣ್ಣ ನೀಡಿದರು ಎಂದು ಹೇಳಿದರು.
ಈ ಹಿಂದೆ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ವೀರಶೈವ ಮಹಾಸಭೆಯವರು ಮನವಿ ಸಲ್ಲಿಸಿದ್ದರು. ಆದರೆ ಶಬ್ದದ ತಾಂತ್ರಿಕ ಬಳಕೆಯ ತೊಂದರೆಯಿಂದಾಗಿ ಆ ಬೇಡಿಕೆ ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಿದ್ದೇವು. ಈ ಹೋರಾಟವನ್ನು ಮೊದಲು ಬೀದರ ಮತ್ತು ಬೆಳಗಾವಿಯಲ್ಲಿ ಆರಂಭ ಮಾಡಲಾಗಿತ್ತು. ಅದರ ನಂತರ ನಾನು ಹೋರಾಟದಲ್ಲಿ ಪಾಲ್ಗೊಂಡಿದ್ದೆ ಹೊರತು ನಾನು ಈ ಹೋರಾಟವನ್ನು ಆರಂಭಿಸಿರಲಿಲ್ಲ ಎಂದರು. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ
ಒಂದು ವೇಳೆ ಈಗಾಗಲೇ ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ನಮ್ಮ ಉಪಪಂಗಡಗಳು 2ಎ ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಪಂಚಮಸಾಲಿ ಸೇರಿದಂತೆ ಬಹುತೇಕ ಎಲ್ಲ ಸಮಾಜಗಳು ಕೃಷಿ ಆಧಾರಿತ ಜೀವನ ಸಾಗಿಸುತ್ತೀವೆ. ಅವರಲ್ಲೂ ಬಡತನವಿದೆ. ಈ ಹಿನ್ನೆಲೆಯಲ್ಲಿ ಕೂಡಲಸಂಗಮ ಮತ್ತು ಹರಿಹರ ಸ್ವಾಮಿಜಿಗಳು ಹೋರಾಟ ಮಾಡುತ್ತಿದ್ದಾರೆ ಅದು ತಪ್ಪಲ್ಲ. ಈ ಸ್ವಾಮಿಜಿಗಳು ನಡೆಸಿದ ಹೋರಾಟದಲ್ಲಿ ನಾನು ಕೂಡ ಚಿತ್ರದುರ್ಗಕ್ಕೆ ತೆರಳಿ ಪಾಲ್ಗೊಂಡು, ನ್ಯಾಯಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದರು.
ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಬೇಡಿಕೆಗಳಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಈ ಹಿಂದೆಯೂ ಸಂಬಂಧವಿರಲಿಲ್ಲ. ಇಂದೂ ಸಂಬಂಧವಿಲ್ಲ. ಮುಂದೆಯೂ ಸಂಬಂಧವಿರಲ್ಲ. ಈ ವಿಷಯದಲ್ಲಿ ಯಾರಲ್ಲಿಯೂ ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ನಾವು ಈಗ ಒಗ್ಗಟ್ಟಾಗುತ್ತಿದ್ದೇವೆ. ಇದರಲ್ಲಿ ಯಾರಿಗೆ ತೊಂದರೆ ಆಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯ ಕುರಿತು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೂ ಮಾಹಿತಿ ನೀಡಿದ್ದೇನೆ ಎಂದರು. ಇದನ್ನೂ ಓದಿ: ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ: ಸತೀಶ್ ಜಾರಕಿಹೊಳಿ ವಿಶ್ವಾಸ
ಈ ಮಧ್ಯೆ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ಹಿನ್ನೆಲೆಯಲ್ಲಿ 2023ರ ಚುನಾವಣೆ ದೃಷ್ಟಿಯಿಂದ ಈ ವಿಚಾರ ಪ್ರಸ್ತಾಪಿಸುತ್ತಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಲ್ಲಿ 113 ಸ್ಥಾನಗಳನ್ನು ಗೆದ್ದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಸಮುದಾಯ, ಯಾವುದೇ ಪಕ್ಷಗಳಲ್ಲಿ ನಾವೇ ನಾಯಕರಾಗುತ್ತೇವೆ ಎಂದರೆ ಸಾಧ್ಯವಿಲ್ಲ. ಜನ ಒಪ್ಪಿ ಬೆಂಬಲ ನೀಡಿದಾಗ ಮಾತ್ರ ನಾವು ನಾಯಕರಾಗುತ್ತೇವೆ. ನಾನು ಈ ಹಿನ್ನೆಲೆಯಲ್ಲಿಯೇ ಚುನಾವಣೆಯ ನಂತರ ಸಭೆ ಸೇರುತ್ತೇನೆ ಎಂದು ಹೇಳಿದ್ದೇನೆ. ಈಗಲೇ ಹೇಳಿದರೆ ಅದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ ಎಂಬ ಪರಿಜ್ಞಾನವು ನನಗೆ ಇದೆ ಎಂದು ಉತ್ತರಿಸಿದರು.
ತಾವು ಹೋರಾಟದಿಂದ ಹೆದರಿ ಹಿಂದೆ ಸರಿಯುತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ತಂದೆ-ತಾಯಿ ಬಿಟ್ಟು ಯಾರಿಗೂ ಹೆದರಲ್ಲ. ನಾನು ಈ ಹಿಂದೆಯೂ ತಪ್ಪು ಮಾಡಿಲ್ಲ. ಇಂದು ಮಾಡಿಲ್ಲ. ಮುಂದೆಯೂ ತಪ್ಪು ಮಾಡಲ್ಲ. ಬೀದರನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮನದಾಳದ ಮಾತನ್ನು ಹೇಳಿದ್ದೇನೆ. ಕಳೆದ ಹೋರಾಟದ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳಿಂದ ಪೆಟ್ಟು ತಿಂದಿದ್ದೇನೆ. ಅಧಿಕಾರ ಕಳೆದುಕೊಂಡಿದ್ದೇನೆ ಎಂದು ಅಂದು ಮನದಾಳದ ಮಾತನ್ನು ಹೇಳಿದ್ದೇನೆ. ಇದರಲ್ಲಿ ನನಗೆ ಯಾವುದೇ ರಾಜಕೀಯ ಅಜಂಡಾ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಈ ಕುರಿತು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೀರಾ? ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ವಿಚಾರವಿಲ್ಲ. ಆದ್ಯಾಗ್ಯೂ ಯಡಿಯೂರಪ್ಪನವರು ನಮ್ಮ ಸಮಾಜದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು. ಚುನಾವಣೆ ನಂತರ ಆ ಸಂದರ್ಭ ಬಂದಾಗ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಮಾನಸಿಕವಾಗಿ ಚಿಕ್ಕಮಗಳೂರಿನ ಬಾಲಕಿಗೆ ಎಷ್ಟು ಘಾಸಿಯಾಗಿರಬಹುದು: ರಮ್ಯಾ ಕಿಡಿ
ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ? ಎಂದು ಕೆಲವರು ನೀಡಿರುವ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಮುಜುಗರ ಆಗುವುದಿಲ್ಲ. ಈ ಹಿಂದೆ ನಾನು ಹೋರಾಟ ಮಾಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಯಾವುದೆ ಹಿನ್ನೆಡೆ ಆಗಿಲ್ಲ. 2008ರಲ್ಲಿ ಹಾಗೂ 2013ರಲ್ಲಿ ಬಂದಷ್ಟೆ ಲಿಂಗಾಯತ ಮತಗಳು 2018ರಲ್ಲಿಯೂ ಬಂದಿದ್ದನ್ನು ದಾಖಲೆ ಸಮೇತ ಈ ಹಿಂದೆಯೆ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈ ಹೋರಾಟದಲ್ಲಿ ತಮ್ಮನ್ನು ಕೆಲವರು ಬೆಂಬಲಿಸುತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನನ್ನ ಹೇಳಿಕೆ ಸ್ಪಷ್ಟವಾಗಿದೆ. ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ ಎಂಬದು ನನಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೂ ನನ್ನ ಹೇಳಿಕೆಗೂ ಈ ಹಿಂದೆಯೂ ಯಾವುದೇ ಸಂಬಂಧವಿಲ್ಲ, ಇಂದು ಸಂಬಂಧವಿಲ್ಲ. ಮುಂದೆಯೂ ಸಂಬಂಧವಿಲ್ಲ. ಡ್ಯಾಮೆಜ್ ಕೂಡ ಆಗಲ್ಲ. ವೀರಶೈವ-ಲಿಂಗಾಯತರು ಒಂದಾಗಿ ಹೋದರೆ ಕಾಂಗ್ರೆಸ್‍ಗೆ ಏನು ಸಮಸ್ಯೆಯಾಗುತ್ತೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಕ್ರಮವಾಗಿ ರಸಗೊಬ್ಬರ ಮಾರಾಟ- 97 ಯೂರಿಯಾ ಚೀಲ ವಶಕ್ಕೆ