– ಪೇಸ್ಟ್‌ನಿಂದ ಬಟ್ಟೆವರೆಗೆ ಎಲ್ಲವೂ ನಕಲಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೂಪ್ಲಿಕೇಟ್ ದುನಿಯಾ ಭರ್ಜರಿ ಸದ್ದು ಮಾಡುತ್ತಿದ್ದು, ಬ್ರ್ಯಾಂಡೆಂಡ್ ಕಂಪನಿಗಳ ಹೆಸರಲ್ಲಿ ದೋಖಾ ನಡೆಯುತ್ತಿದೆ.
ಬೆಳಗ್ಗೆ ಎದ್ದ ತಕ್ಷಣ ಬಳಿಸುವ ಟೂತ್‍ಪೇಸ್ಟ್‌ನಿಂದ ಹಿಡಿದು, ರಾತ್ರಿ ಮಲಗುವಾಗ ಬಳಸುವ ಗುಡ್‍ನೈಟ್ ಕಾಯಿಲ್ ವರೆಗೂ ಎಲ್ಲಾ ವಸ್ತುಗಳು ಬ್ರ್ಯಾಂಡೆಂಡ್ ಆಗಿರಬೇಕು ಅಂತ ಬಯಸುತ್ತೇವೆ. ಅಷ್ಟೇ ಯಾಕೆ ಏನೇ ಖರೀದಿಸುವ ಮುನ್ನ ಬ್ರ್ಯಾಂಡ್ ಯಾವುದು ಎಂದು ನೋಡುತ್ತೇವೆ. ಇದನ್ನೇ ಟಾರ್ಗೆಟ್ ಮಾಡಿಕೊಂಡು ಬ್ರ್ಯಾಂಡ್ ನಕಲಿ ಮಾಡುತ್ತಿರುವ ಮಾರ್ಕೆಟ್ ವೀರರ ಜಾಲ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ವೇಳೆ ಬಯಲಾಗಿದೆ.
Advertisement
Advertisement
ಚೀಪ್‍ರೇಟ್, ಹಾಫ್‍ರೇಟ್ ಎಂದು ಕೂಗುವ ಅನೇಕ ವ್ಯಾಪಾರಿಗಳ ಬಳಿ ಸ್ಟ್ಯಾಂಡರ್ಡ್ ಬ್ರ್ಯಾಂಡೆಡ್ ವಸ್ತುಗಳು ಕಾಣುತ್ತವೆ. ಆದರೆ ಕಡಿಮೆ ಬೆಲೆಗೆ ಸಿಗುತ್ತವೆ ಅಂತ ಖರೀದಿಸಿದರೆ ಭಾರೀ ದೋಖಾಗೆ ಗುರಿಯಾಗಬೇಕಾಗುತ್ತದೆ ಏಕೆಂದರೆ ಬೆಂಗಳೂರಿನ ಅನೇಕ ಮಾರ್ಕೆಟ್‍ಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ದೊಡ್ಡ ದೊಡ್ಡ ಬ್ರ್ಯಾಂಡ್‍ಗಳ ನಕಲಿ ವಸ್ತುಗಳು ಮಾರಾಟವಾಗುತ್ತಿವೆ.
Advertisement
ಬೆಂಗಳೂರಿಗರ ನೆಚ್ಚಿನ ಶಾಪಿಂಗ್ ಸ್ಪಾಟ್ ಅಂದರೆ ಚಿಕ್ಕಪೇಟೆ. ಇಲ್ಲಿ ನಡೆಯುವ ಸಂಡೆ ಬಜಾರ್ ನಲ್ಲಿ ಗುಂಡು ಪಿನ್ನಿನಿಂದ ಹಿಡಿದು ಲಿಫ್ಟ್ ಬಿಡಿಭಾಗಗಳವರೆಗೂ ಎಲ್ಲಾ ವಸ್ತುಗಳು ಸಿಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಬ್ರ್ಯಾಂಡ್ ವಸ್ತುಗಳೇ ಸಿಗುತ್ತದೆ. ಅವುಗಳನ್ನು ನೀವೇನಾದರೂ ಖರೀದಿಸಿದರೆ ಮೋಸ ಹೋಗುವುದಂತೂ ಗ್ಯಾರಂಟಿ. ಏಕೆಂದರೆ ಇವೆಲ್ಲ ಅಸಲಿ ಬ್ರ್ಯಾಂಡ್‍ಗಳ ವಸ್ತುಗಳಲ್ಲ. ಇಷ್ಟು ಕಡಿಮೆ ದರದಲ್ಲಿ ಅಸಲಿ ಉತ್ಪನ್ನ ಸಿಗುವುದಿಲ್ಲ. ಕಡಿಮೆ ದರಕ್ಕೆ ಸಿಗುವ ವಸ್ತುಗಳು ಸೆಕೆಂಡ್ ಕಾಪಿ, ಒರಿಜಿನಲ್ ಅಲ್ಲ ಎಂದು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ. ಬ್ರ್ಯಾಂಡ್ ಕ್ರೇಜ್ ಇರುವ ಗ್ರಾಹಕರಿಗೆ ವ್ಯಾಪಾರಿಗಳು ಚೆನ್ನಾಗಿ ಟೋಪಿ ಹಾಕುತ್ತಿದ್ದಾರೆ.
Advertisement
ಎಸ್.ಪಿ.ರೋಡ್, ಕೆ.ಆರ್.ಮಾರ್ಕೆಟ್ ನಲ್ಲಿಯೂ ರಾಶಿ ರಾಶಿ ಎಲೆಕ್ಟ್ರಿಕ್ ವಸ್ತುಗಳನ್ನು ಕಾಣುತ್ತೇವೆ. ಪ್ರತಿಷ್ಠಿತ ಕಂಪನಿಗಳ ಹೆಸರು ಹೊಂದಿರುವ ಮೊಬೈಲ್ ಚಾರ್ಜರ್, ಇಯರ್ ಫೋನ್, ಸ್ಪೀಕರ್, ಹೆಡ್ ಫೋನ್‍ಗಳನ್ನು ಇಲ್ಲಿ ಸಿಗುತ್ತವೆ. ಸಾಮಾಜಿನ್ಯವಾಗಿ ಕಡಿಮೆ ದರಕ್ಕೆ ಸಿಗುವ ಈ ಎಲ್ಲ ವಸ್ತುಗಳು ನಕಲಿಯಾಗಿವೆ.
ಶಿವಾಜಿ ನಗರದಲ್ಲಿ 32 ಜಿಬಿ ಪೆನ್ ಡ್ರೈವ್ ಕೇವಲ ನೂರು ರೂಪಾಯಿಗೆ, 2-3 ಸಾವಿರ ರೂ.ಗೆ ಎಲ್‍ಇಡಿ ಟಿವಿಗಳು, ಸ್ಪೀಕರ್, ಹೋಮ್ ಥೇಂಟರ್ ಗಳು ಸಿಗುತ್ತವೆ. ಮೆಜೆಸ್ಟಿಕ್‍ಗೆ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಇಲ್ಲಿನ ಅಂಡರ್ ಪಾಸ್‍ನಲ್ಲಿ ಮೊಬೈಲ್‍ಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾರಾಟವಾಗುತ್ತವೆ. ಇವುಗಳಲ್ಲಿ ಹೆಚ್ಚಿನ ವಸ್ತುಗಳು ನಕಲಿ ವಸ್ತುಗಳೇ ಆಗಿದೆ ಎನ್ನಲಾಗಿದೆ.
ಈ ನಕಲಿ ವಸ್ತುಗಳ ಮಾರಾಟ ಜಾಲ ಅವ್ಯಾಹತವಾಗಿ ಸಾಗಿದ್ದು, ಎಲ್ಲಾ ರೀತಿಯ ಮೊಬೈಲ್‍ಗೆ ಸಂಬಂಧಿಸಿದ ವಸ್ತುಗಳು, ವಾಚ್, ಗೃಹೋಪಯೋಗಿ ವಸ್ತುಗಳು ಮಾರಾಟವಾಗುತ್ತಿವೆ. ಇವುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿವೆ ಎಂದು ವೈದ್ಯರು ಹೇಳುತ್ತಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ವೈದ್ಯರು ಆಂಜನಪ್ಪ, ನಕಲಿ ಬ್ರ್ಯಾಂಡ್ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇ ದುಷ್ಪರಿಣಾಮ ಬೀರುತ್ತದೆ. ಸ್ಮಾರ್ಟ್ ಫೋನ್‍ಗಳ ನಕಲಿ ಚಾರ್ಜರ್ ಗಳು ಸ್ಫೋಟವಾಗುವ ಸಾಧ್ಯತೆ ಹೆಚ್ಚು. ಹೀಗೆ ಸ್ಫೋಟವಾದಾಗ ಕಣ್ಣು ಸೇರಿದಂತೆ ದೇಹದ ಇತರೆ ಭಾಗಗಳಿಗೆ ಗಾಯವಾಗುತ್ತದೆ. ನಕಲಿ ಇಯರ್ ಫೋನ್, ಹೆಡ್ ಫೋನ್ ಹಾಕುವುದರಿಂದ ಕಿವಿಯಲ್ಲಿ ರಕ್ತ ಸೋರಬಹುದು ಎಂದು ತಿಳಿಸಿದ್ದಾರೆ.