ಬೆಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನಿಂದ ಚೇತರಿಸಿಕೊಂಡಿದ್ದ ಬೆಂಗಳೂರಿನ ವೈದ್ಯರಿಗೆ ಮತ್ತೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಓಮಿಕ್ರಾನ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ ವೈದ್ಯರು ವಾರದ ಹಿಂದೆಯಷ್ಟೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ನೆಗೆಟಿವ್ ಬಂದ ಕಾರಣ ಡಿಸ್ಚಾರ್ಜ್ ಆಗಿದ್ದರು. ಆದಾಗ್ಯೂ ವೈದ್ಯರ ನಿಗಾದಲ್ಲಿದ್ದ ಅವರು ಒಂದು ವಾರದ ನಂತರ ಮತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿದ್ದಾರೆ. ವರದಿಯಲ್ಲಿ ಮತ್ತೆ ಕೋವಿಡ್ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ
ಈ ವೈದ್ಯರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ಪರೀಕ್ಷೆ ಮಾಡಿಸಿದ್ದಾಗ ಅವರಿಗೆ ಸೋಂಕು ದೃಢಪಟ್ಟಿತ್ತು.
ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಸೋಂಕಿಗೆ ಒಳಗಾಗಿದ್ದ ವೈದ್ಯರ ಸಂಪರ್ಕದಲ್ಲಿದ್ದ ಐದು ಮಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ವರದಿಯೂ ಪಾಸಿಟಿವ್ ಬಂದಿತ್ತು. ಅದಾದ ಕೆಲ ದಿನಗಳ ಬಳಿಕ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದು ಎಲ್ಲರೂ ಡಿಸ್ಚಾರ್ಜ್ ಆಗಿದ್ದರು. ಇವರ ಸ್ಯಾಂಪಲ್‌ಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದ್ದು, ಇನ್ನಷ್ಟೇ ವರದಿ ಬರಬೇಕಾಗಿದೆ. ಇದನ್ನೂ ಓದಿ: ಭಯ ಬೇಡ, 3 ನೇ ಅಲೆ ಇನ್ನೂ ಬಂದಿಲ್ಲ: ತಜ್ಞರ ಜಾಗೃತಿ ಸಂದೇಶ
ಕರ್ನಾಟಕದಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು. ಇಬ್ಬರ ಸಂಪರ್ಕಕ್ಕೆ ಬಂದಿದ್ದ 200ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಲಾಗಿತ್ತು. ಅವರ ಪೈಕಿ 13 ಮಂದಿ ಪ್ರಾಥಮಿಕ ಹಾಗೂ ಉಳಿದವರು ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದರು. ಅವರನ್ನೂ ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.