ಒಟ್ಟಾವಾ: ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ವೈದ್ಯೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಡಾ. ಪ್ರಿಯಾ ಶರತ್, ಡೆರ್ಮಾಟೋಲೊಜಿಸ್ಟ್ (ಚರ್ಮರೋಗ ತಜ್ಞೆ) ಹಾಗೂ ಕಾಸ್ಮೆಟಾಲಜಿಸ್ಟ್ ಆಗಿದ್ದು, ಇತ್ತೀಚೆಗೆ ಟೊರೊಂಟೊದಲ್ಲಿ ನಡೆದ ಮಿಸೆಸ್ ಯೂನೈಟೆಡ್ ನೇಶನ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆ 2019ರಲ್ಲಿ ಭಾಗವಹಿಸಿದ್ದರು. ಪ್ರಿಯಾ ಶರತ್ ಈ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.
2018ರಲ್ಲಿ ಮಿಸೆಸ್ ಇಂಡಿಯಾ ಗ್ಯಾಲೆಕ್ಸಿ ಸ್ಪರ್ಧೆಯಲ್ಲಿ ಪ್ರಿಯಾ ತನ್ನ ಸಾಮಾಜಿಕ ಕೆಲಸಕ್ಕಾಗಿ ಮಿಸೆಸ್ ಸೋಶಿಯಲ್ ಐಕಾನ್ ಕಿರೀಟವನ್ನು ಗೆದಿದ್ದರು. ಬಳಿಕ ಪ್ರಿಯಾ ಅವರು ನವದೆಹಲಿಯಲ್ಲಿ ನಡೆದ ಮಿಸೆಸ್. ಇಂಡಿಯಾ ಯೂನೈಟೆಡ್ ನೇಶನ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಗೆಲ್ಲಲು ಹೋಗಿದ್ದರು.
ಪ್ರಿಯಾ ಶರತ್ ಮೂಲತಃ ಮಂಗಳೂರಿನವರಾಗಿದ್ದು, ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿದ್ದರು. ಬಳಿಕ ಮಂಗಳೂರಿನ ಮುಲ್ಲರ್ ಕಾಲೇಜಿನಿಂದ ಎಂಡಿ ಪದವಿಯನ್ನು ಪಡೆದುಕೊಂಡಿದ್ದರು. ಸದ್ಯ ಪ್ರಿಯಾ ಅವರು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್ ನಲ್ಲಿ ಚರ್ಮರೋಗ ತಜ್ಞೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾನು ರ‍್ಯಾಂಪ್ ಮೇಲೆ ನಡೆಯಬೇಕು ಎಂಬುದು ನನ್ನ ಬಾಲ್ಯದ ಕನಸು. ನಾನು ಕಾಲೇಜಿನಲ್ಲಿ ಇದ್ದಾಗ ಓದುವುದರಲ್ಲಿ ಬ್ಯುಸಿಯಿದ್ದೆ. ಬಳಿಕ ನನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡೆ. ಈಗ ನನ್ನ ಮಗ ಅನುಜ್ 8ನೇ ತರಗತಿ ಓದುತ್ತಿದ್ದು, ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾನೆ. ಹಾಗಾಗಿ ನಾನು ಮಾಡೆಲಿಂಗ್ ಮಾಡೋಣ ಎಂದುಕೊಂಡೆ ಎಂದು ಪ್ರಿಯಾ ತಿಳಿಸಿದ್ದಾರೆ.
ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಜೊತೆ ಕೆಲಸ ಮಾಡುವುದು ನನ್ನ ಕನಸು. ಅವರು ನನ್ನ ಮೊದಲ ಆದ್ಯತೆಯಾಗಿರುತ್ತಾರೆ. ನನ್ನ ಬಳಿ ಈಗ ಒಂದು ಯೋಜನೆ ಇದೆ. ನಾನು ಈಗಾಗಲೇ ಈ ಯೋಜನೆ ಬಗ್ಗೆ ಕೆಲವರ ಹತ್ತಿರ ಮಾತನಾಡಿದ್ದೇನೆ. ಅವರು ಕೂಡ ಈ ಯೋಜನೆಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯ ನಿರ್ವಹಣೆ ಮಾಡುವುದು ಒಂದು ಸವಾಲಾಗಿದೆ. ನನ್ನ ಕುಟುಂಬಸ್ಥರ ಹಾಗೂ ಸ್ನೇಹಿತರ ಬೆಂಬಲದಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು ಎಂದು ಪ್ರಿಯಾ ಹೇಳಿದ್ದಾರೆ.