ಬೆಂಗಳೂರು: ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸುವಂತೆ ಇಂದು ಅನರ್ಹ ಶಾಸಕರು ಮನವಿ ಮಾಡಿಕೊಳ್ಳಲಿದ್ದಾರೆ.
ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ, ನ್ಯಾ.ಎನ್ ವಿ ರಮಣ ನೇತೃತ್ವದ ದ್ವಿ ಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಳ್ಳಲಿದ್ದಾರೆ. ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಶೀಘ್ರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ರೊಹ್ಟಗಿ ಮನವಿ ಮಾಡಲಿದ್ದಾರೆ.
ಈಗಾಗಲೇ ಒಮ್ಮೆ ತುರ್ತು ವಿಚಾರಣೆ ಮನವಿ ಮಾಡಿ ಹಿನ್ನಡೆ ಅನುಭವಿಸಿದ್ದ ಅನರ್ಹ ಶಾಸಕರು, ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿಚಾರಣೆ ವಿಳಂಬ ಆಗುತ್ತಿದ್ದಂತೆಯೇ ದೆಹಲಿಗೆ ಆಗಮಿಸಿದ್ದ ಅನರ್ಹ ಶಾಸಕರು ವಕೀಲ ಮುಕುಲ್ ರೊಹ್ಟಗಿ ಭೇಟಿಯಾಗಿ ಚರ್ಚೆ ನಡೆಸಿದರು. ವಿಚಾರಣೆ ವಿಳಂಬ ಸಂಬಂಧ ಮಾತುಕತೆ ನಡೆಸಿದ ಅವರು ಮತ್ತೊಮ್ಮೆ ಮನವಿ ಮಾಡುವಂತೆ ರೊಹ್ಟಗಿಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಕುಲ್ ರೊಹ್ಟಗಿ ಮತ್ತೊಂದು ಪ್ರಯತ್ನ ಮಾಡಲಿದ್ದು ನ್ಯಾ. ಎನ್.ವಿ ರಮಣ ಮುಂದೆ ಮನವಿ ಮಾಡಲಿದ್ದಾರೆ. ಒಂದು ವೇಳೆ ವಿಚಾರಣೆಗೆ ನ್ಯಾ. ಎನ್.ವಿ ರಮಣ ಒಪ್ಪದಿದ್ದರೆ ನಾಳೆ ಮು.ನ್ಯಾ ರಂಜನ್ ಗೊಗಯ್ ಪೀಠಕ್ಕೆ ವಾಪಸ್ ಹೋಗುವ ಬಗ್ಗೆ ವಕೀಲರು ತಿರ್ಮಾನಿಸಿದ್ದಾರೆ.
ಅಯೋಧ್ಯೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನ್ಯಾ.ಎನ್ ವಿ ರಮಣ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಯಿತು. ಮಂಗಳವಾರ ರಂಜನ್ ಗೊಗಯ್ ಕೆಲಕಾಲ ಬೇರೆ ಅರ್ಜಿಗಳ ವಿಚಾರಣೆ ನಡೆಸಲಿದ್ದು, ಈ ವೇಳೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸಂಬಂಧ ಪ್ರಸ್ತಾಪ ಮಾಡುವ ಬಗ್ಗೆ ವಕೀಲರು ಚಿಂತಿಸಿದ್ದಾರೆ.