ಬೆಂಗಳೂರು: ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಟೀಕಿಸಿದ್ದ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ದಿನೇಶ್ ಅವರ ಪತ್ನಿ ತಬು ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ದಿನೇಶ್ ಅವರು ನೀಡಿರುವ ಹೇಳಿಕೆ ಬಗ್ಗೆ ಏನಾದ್ರು ಹೇಳಿ, ಆದರೆ ಮಾತಿನ ಭರದಲ್ಲಿ ನನ್ನನ್ನು ಎಳೆ ತರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರತಾಪ್ ಸಿಂಹ ಅವರ ಹೇಳಿಕೆ ತಮಗೇ ತೀವ್ರವಾಗಿ ನೋವುಂಟು ಮಾಡಿದೆ. ಆದರೆ ದಿನೇಶ್ ಅವರ ಹೇಳಿಕೆ ವಿಚಾರದಲ್ಲಿ ನನ್ನನ್ನು ಎಳೆ ತಂದಿರುವುದು ಪ್ರತಾಪ್ ಸಿಂಹ ಹೇಡಿತನವನ್ನು ತೊರುತ್ತದೆ ಎಂದು ಕಿಡಿಕಾರಿದ್ದಾರೆ.
ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಯಲ್ಲಿ ತಮ್ಮ ಹೆಸರನ್ನು ಬೇಗಂ ತಬು ಎಂದು ಪ್ರಸ್ತಾಪ ಮಾಡಿರುವುದು ಅವರ ಕೋಮುವಾದಿತನದ ಕೀಳು ಮನೋಭಾವನೆಯನ್ನು ಪ್ರದರ್ಶಿಸುತ್ತದೆ. ತಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದು ಹಾಗೂ ಬ್ರಾಹ್ಮಣ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ನಾವಿಬ್ಬರು ಸಂತೋಷವಾಗಿಯೇ ಮದುವೆಯಾಗಿದ್ದೇವೆ. ಭಾರತೀಯ ಸಂಸ್ಕೃತಿಯ ವೈವಿಧ್ಯತೆಯಲ್ಲಿನ ಏಕತೆ ಎಂಬ ಮೌಲ್ಯದ ಆಧಾರದ ಮೇಲೆ ಎರಡು ದಶಕಗಳಿಂದ ಸಂತೋಷದಿಂದ ಜೀವನ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರಾಗಿ ಸಮಾಜದಲ್ಲಿ ಅನಾರೋಗ್ಯಕರ ಬೀಜಗಳನ್ನು ಬಿತ್ತನೆ ಮಾಡುವ ಬದಲು ಕುವೆಂಪು ಅವರ ವಿಶ್ವ ಮಾನವ ಸಂದೇಶ ಪಾಲಿಸುವಂತೆ ಪ್ರತಾಪ್ ಸಿಂಹ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.