ಬೆಂಗಳೂರನ್ನು ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿಯವರು ಎಂದ ಸಚಿವ
ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯೇ ಆಗಲಿಲ್ಲ. ನಗರವನ್ನೇ ಹಾಳು ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಬಿಜೆಪಿ ನಿಯೋಗ ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಭೇಟಿಯಾಗಿ ಬೆಂಗಳೂರು ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ಬೇಡಿಕೆ ಇಟ್ಟಿರುವ ಬಗ್ಗೆ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.ಇದನ್ನೂ ಓದಿ: ಕೇರಳ | ವಿದ್ಯಾರ್ಥಿಗಳ ನಡುವೆ ಮಾರಾಮಾರಿ – 10ನೇ ತರಗತಿ ಬಾಲಕ ಸಾವು
ಯಡಿಯೂರಪ್ಪ-ಬೊಮ್ಮಾಯಿ ಅವಧಿಯಲ್ಲಿ ಬಿಬಿಎಂಪಿಗೆ 8 ಸಾವಿರ ಕೋಟಿ ರೂ. ಅನುದಾನ ಕೊಟ್ಟಿರಲಿಲ್ಲ. ಬಿಜೆಪಿಯವರು ಸುಳ್ಳು ಹೇಳ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ 2017 ರಿಂದ 2019 ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸೇರಿ 7 ಸಾವಿರ ಕೋಟಿ ರೂ.ಯನ್ನು ಘೋಷಣೆ ಮಾಡಿದ್ದರು. ನಮ್ಮ ಸರ್ಕಾರ ಬಿದ್ದ ಮೇಲೆ ಬಿಜೆಪಿಯುವರು ನಾವು ಕೊಟ್ಟ 7 ಸಾವಿರ ಕೋಟಿ ರೂ.ಯನ್ನು ಹಂಚಿಕೆ ಮಾಡಿಕೊಂಡಿದ್ದರು. ಆಗ ನಮ್ಮ ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಕೇವಲ 1,600 ಕೋಟಿ ರೂ. ಮಾತ್ರ ಕೊಟ್ಟಿದ್ದರು. ಆದರೆ ಬಿಜೆಪಿ ಶಾಸಕರು 5,400 ಕೋಟಿ ರೂ. ಅನುದಾನ ಪಡೆದುಕೊಂಡಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಬಿಜೆಪಿ ಶಾಸಕರಿಗೆ ನೂರು ಕೋಟಿ ಕಡಿಮೆ ಅನುದಾನ ಕೊಟ್ಟೇ ಇಲ್ಲ. ಬಿಜೆಪಿಯವರು ಬಂದ ಮೇಲೆ ಕಾಂಗ್ರೆಸ್ ಶಾಸಕರ ಅನುದಾನ ಕಡಿಮೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 400 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಪಾದಚಾರಿ ಮಾರ್ಗ, ರಸ್ತೆ ಅಗಲೀಕರಣ, ಟೆಂಡರ್ ಶ್ಯೂರ್, ಸಿಗ್ನಲ್ ಫ್ರೀ ಕಾರಿಡಾರ್, ವೈಟ್ ಟಾಪಿಂಗ್, 8 ಕಡೆ ಸ್ಕೈವಾಕ್, ಬಸ್ ಶೆಲ್ಟರ್, ಪಾರ್ಕಿಂಗ್ ವ್ಯವಸ್ಥೆ, 6 ಕಡೆ ಘನತ್ಯಾಜ್ಯ ನಿರ್ವಹಣೆ, ಇಂದಿರಾ ಕ್ಯಾಂಟಿನ್, ಕೆರೆಗಳ ಅಭಿವೃದ್ಧಿ ಎಲ್ಲ ಕೆಲಸಗಳು ನಮ್ಮ ಸರ್ಕಾರದ ಅವಧಿಯಲ್ಲಿ ಆಗಿವೆ. ಬಿಜೆಪಿಯವರು 4 ವರ್ಷ ಅಧಿಕಾರ ಮಾಡಿದ್ದರು. ಅವರ ಅವಧಿಯಲ್ಲಿ ನೆನಪಿಡುವ ಹಾಗೇ ಯಾವ ಕೆಲಸ ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.
ನಾನು ಸಿಎಂ ಅವರಿಗೆ ಮನವಿ ಮಾಡುತ್ತೇನೆ. ಬಿಜೆಪಿ ಅವರು ಅಧಿಕಾರ ಬಿಟ್ಟು ಹೋಗುವಾಗ ಬಿಬಿಎಂಪಿಯಲ್ಲಿ 6 ಸಾವಿರ ಕೋಟಿ ರೂ. ಬಾಕಿ ಇಟ್ಟಿದ್ದರು. ಬಿಡಿಎದಲ್ಲಿ 2-3 ಸಾವಿರ ಕೋಟಿ ರೂ. ಸಾಲ ಇಟ್ಟಿದ್ದರು. ಬೆಸ್ಕಾಂನಲ್ಲಿ 2-3 ಸಾವಿರ ಕೋಟಿ ರೂ. ಬಾಕಿ ಇಟ್ಟಿದ್ದರು. ಈಗ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅವರು ಯಾಕೆ ಬಿಬಿಎಂಪಿ ಚುನಾವಣೆ ಮಾಡಲಿಲ್ಲ. ನಾವು ಚುನಾವಣೆ ಮಾಡ್ತೀವಿ. ಗ್ರೇಟರ್ ಬೆಂಗಳೂರು ಎಲ್ಲವೂ ಆಗುತ್ತಿದೆ ಎಂದರು.
ಬಿಜೆಪಿ ಅವರು ಸಾಲ ಇಟ್ಟು ಹೋಗಿದ್ದರಿಂದ ನಮಗೂ ಸಮಸ್ಯೆ ಆಯ್ತು. ಈಗ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ 100 ಕೋಟಿ ರೂ. ಪ್ರತಿ ಕ್ಷೇತ್ರಕ್ಕೆ ಸಿಎಂ ಕೊಡಲಿ ಎಂದು ಮನವಿ ಮಾಡಿದ್ದರು. ಬೆಂಗಳೂರನ್ನು ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿಯವರು. ಅವರ ಅವಧಿಯಲ್ಲಿ ಅನೇಕ ಕಟ್ಟಡಗಳನ್ನು ಅಡಮಾನ ಇಟ್ಟಿದ್ದರು. ಅದನ್ನೆಲ್ಲಾ ನಾವು ಬಿಡಿಸಿದ್ದೇವೆ. ಪ್ರತಿವರ್ಷ 8 ಸಾವಿರ ರೂ. ಕೊಟ್ಟಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. 4 ವರ್ಷ 32 ಸಾವಿರ ಕೋಟಿ ರೂ. ಆಗಬೇಕಿತ್ತು. ಆದರೆ 32 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಆಗಲಿಲ್ಲ. ಕೋರ್ಟ್ ಮಾನಿಟರ್ ಮಾಡುವ ಸ್ಥಿತಿಗೆ ತಂದಿದ್ದರು ಎಂದು ಕಿಡಿಕಾರಿದರು.ಇದನ್ನೂ ಓದಿ: ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ : ರಾಮಲಿಂಗಾರೆಡ್ಡಿ