– ಈವರೆಗೂ ಒಂದೇ ಒಂದು ರೂಪಾಯಿ ಮೋದಿ ಕೊಟ್ಟಿಲ್ಲ
ಬೆಂಗಳೂರು: ಕುಮಾರಸ್ವಾಮಿ ಸರ್ಕಾರ ಬೀಳಿಸಲು ಕಾಂಗ್ರೆಸ್ಸಿನ ಕೆಲವರು ಬಿಜೆಪಿ ಜೊತೆ ಕೈ ಜೋಡಿಸಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಇಂದು ಜೆಪಿ ಭವನದಲ್ಲಿ ಮಾತಾನಾಡಿದ ಅವರು, ಕುಮಾರಸ್ವಾಮಿ ಸಿಎಂ ಕುರ್ಚಿ ಮೇಲೆ ಕುಳಿತಿರುವುದನ್ನು ಕೆಲವರಿಗೆ ನೋಡೋಕೆ ಆಗಲಿಲ್ಲ. ಕೆಲವು ಕಾಂಗ್ರೆಸ್ ಮಿತ್ರರಿಗೆ ಸರ್ಕಾರ ಕೆಡವಬೇಕಿತ್ತು. ಹೀಗಾಗಿ ಬಿಜೆಪಿಯವರ ಜೊತೆ ಕೈ ಜೋಡಿಸಿ ಸರ್ಕಾರ ತೆಗೆದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೆರೆ ಪರಿಹಾರದ ಹಣ ಬಿಡುಗಡೆ ಮಾಡದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ದೇವೇಗೌಡರು ಈವರೆಗೂ ಒಂದೇ ಒಂದು ರೂಪಾಯಿ ಮೋದಿ ಕೊಟ್ಟಿಲ್ಲ. ಈಗ ಕೊಟ್ಟಿರೋದು ಹಿಂದಿನ ಬರದ ಅನುದಾನ ಅಷ್ಟೇ. ನರೇಗಾದ ಕೂಲಿ ಹಣ ಕೂಡಾ ಕೇಂದ್ರ ಸರ್ಕಾರ ಕೊಟ್ಟಿಲ್ಲ. 26 ಸಂಸದರನ್ನು ಜನ ಕಳಿಸಿದ್ದಾರೆ. ಇವರೆಲ್ಲ ಏನೋ ಕಡಿದು ಕಟ್ಟೆ ಹಾಕ್ತೀನಿ ಅಂತಾರೆ ನೋಡೋಣ ಏನ್ ಕೊಡುತ್ತಾರೆ ಎಂದು ಕಿಡಿಕಾರಿದರು.
ಈ ದೇವೇಗೌಡ ಸುಮ್ಮನೆ ಕುಳಿತುಕೊಳ್ಳೊಲ್ಲ. ಯಾರಿಗೂ ಹೆದರಬೇಕಿಲ್ಲ, ಯಾರ ದಾಕ್ಷಿಣ್ಯವೂ ಇಲ್ಲ. ನಾನು ವ್ಯಕ್ತಿಗತ ಟೀಕೆ ಮಾಡುವುದಿಲ್ಲ. ರಾಜ್ಯದ ಮಹಾಜನತೆ ಪಾಪ ಅವರಿಗೆ ಆಶೀರ್ವಾದ ಮಾಡಿಬಿಟ್ಟರು. ಅವರನ್ನು ಹಿಡಿದು ನಿಲ್ಲಿಸಲು ಆಗುತ್ತಿಲ್ಲ. ಹಾಲು ಕಾದಷ್ಟು ಒಳ್ಳೆಯದು ನೋಡೋಣ ಬಿಡಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗ ದೆಹಲಿಯಲ್ಲಿ ಹೋರಾಟ ಮಾಡೋಕೆ ನನ್ನ ಬಳಿ ಯಾರು ಇಲ್ಲ. ನನ್ನ ಮೊಮ್ಮಗ ಒಬ್ಬ ಮಾತ್ರ ದೆಹಲಿಯಲ್ಲಿ ಇದ್ದಾನೆ ಅಷ್ಟೇ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.