ಬೆಂಗಳೂರು: ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲು ಈ ಹಿಂದೆ ನಿಗದಿ ಪಡಿಸಿದ್ದ (ಇ-ಕೆವೈಸಿ) ಅಂತಿಮ ಅವಧಿಯನ್ನು ವಿಸ್ತರಣೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಚ್ ಅಂತ್ಯದವರೆಗೆ ಹೊಸ ಗಡುವು ನೀಡಿ ಆದೇಶ ನೀಡಿದೆ.
ಪಡಿತರ ಚೀಟಿಗೆ ಇದುವರೆಗೂ ಆಧಾರ್ ಸಂಖ್ಯೆ ಜೋಡಣೆ ಮಾಡದಿರುವ ಎಲ್ಲಾ ನ್ಯಾಯಬೆಲೆ ಅಂಗಡಿ ವರ್ತಕರು ಅಂಗಡಿಗಳನ್ನು ತೆರೆದು ಇ-ಕೆವೈಸಿಯನ್ನು ಕಡ್ಡಾಯವಾಗಿ ಜ.01 ರಿಂದ 31ರವರೆಗೂ ನಿರ್ವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇ-ಕೆವೈಸಿ ನಿರ್ವಹಿಸಲು ಹೆಚ್ಚುವರಿ ಸರ್ವರ್ ಅವಶ್ಯಕತೆ ಇರುವುದರಿಂದ ತಾತ್ಕಾಲಿಕವಾಗಿ ಜ.7ರವರೆಗೂ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಜ.8ರ ಬಳಿಕ ಮಾರ್ಚ್ ತಿಂಗಳ ಅಂತ್ಯದವರೆಗೂ ಇ-ಕೆವೈಸಿ ಮಾಡಲು ಅವಕಾಶ ನೀಡಿ ಆಹಾರ ಇಲಾಖೆ ಸುತ್ತೋಲೆ ಹೊರಡಿಸಿದೆ.
Advertisement
Advertisement
ಕಳೆದ 4 ವರ್ಷಗಳ ಹಿಂದೆ ಬೋಗಸ್ ಪಡಿತರ ಚೀಟಿ ತಡೆಯುವ ಸಲುವಾಗಿ ಪರಿಶೀಲನಾ ಕಾರ್ಯವನ್ನು ಸರ್ಕಾರ ನಡೆಸಿತ್ತು. ಆದರೆ ಆಧಾರ್ ಜೋಡಣೆ ನಿಯಮ ಜಾರಿಗೊಂಡ ಬಳಿಕ ಪಡಿತರ ಚೀಟಿ ಪರಿಶೀಲನೆ ಕಾರ್ಯ ಕೈಗೊಂಡಿರಲಿಲ್ಲ. ಸದ್ಯ ಮೃತರ ಹೆಸರಿನಲ್ಲೇ ಇರುವ ಪಡಿತರ ಚೀಟಿಯನ್ನು ಮುಂದುವರಿಸುತ್ತಿರುವ ಆರೋಪಗಳಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ನಿಯಮ ಜಾರಿ ಮಾಡಲಾಗಿದೆ.
Advertisement
ಪ್ರಕ್ರಿಯೆ ಹೇಗೆ?
ಇ-ಕೆವೈಸಿ ದೃಢೀಕರಣ ವೇಳೆ ಎಸ್‍ಟಿ ಮತ್ತು ಎಸ್‍ಸಿ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಿದೆ. ಎಲ್ಲಾ ಫಲಾನುಭವಿಗಳು ಗ್ಯಾಸ್ ಸಂಪರ್ಕದ ಕುರಿತು ಮಾಹಿತಿ ನೀಡಬೇಕು. ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ ಮಾಡಿಸಬೇಕು. ಸರ್ಕಾರ ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ.ನಂತೆ, ನೋಂದಣಿಗೆ ಗರಿಷ್ಠ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇ-ಕೆವೈಸಿ ಮಾಡಿಸಬೇಕು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು.