ಬೆಂಗಳೂರು: ಮೈತ್ರಿ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದ್ದರೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಮಾತ್ರ ಝೀರೋ ಟ್ರಾಫಿಕ್ ವ್ಯಾಮೋಹ ಕಡಿಮೆ ಆಗಿಲ್ಲ.
ಹೌದು. ಪರಮೇಶ್ವರ್ ಅವರು ಯಶವಂತಪುರ ತಾಜ್ ವಿವಾಂತ ಹೋಟೆಲ್ ನಿಂದ ಹೊರಡುತ್ತಿದ್ದಂತೆಯೇ ಟ್ರಾಫಿಕ್ ಪೊಲೀಸರು ಅವರಿಗೆ ಸಿಗ್ನಲ್ ಫ್ರೀ ಮಾಡಿಕೊಟ್ಟರು. ಹೀಗಾಗಿ ಝೀರೋ ಟ್ರಾಫಿಕ್‍ನಲ್ಲಿ ಡಿಸಿಎಂ ತೆರಳಿದರು. ತಾಜ್ ವಿವಾಂತ್‍ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರ ಜೊತೆ ಚರ್ಚೆ ಮಾಡಲು ಡಾ.ಜಿ ಪರಮೇಶ್ವರ್ ಬಂದಿದ್ದರು.
ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ನೋಡಿ ಜನರು ಬೇಸತ್ತಿದ್ದಾರೆ. ಇಷ್ಟು ದಿನ ಅತೃಪ್ತ ಶಾಸಕರು ಮಾತ್ರ ರೆಸಾರ್ಟ್ ಸೇರಿದ್ದರು. ಆದರೆ ಈಗ ರಾಜ್ಯದ ಆಡಳಿಕ ಪಕ್ಷ ಹಾಗೂ ವಿರೋಧ ಪಕ್ಷದ ಕೆಲ ನಾಯಕರು ರೆಸಾರ್ಟ್ ರಾಜಕೀಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಒಂದೆಡೆ ಜೆಡಿಎಸ್ ಶಾಸಕರು ನಂದಿಬೆಟ್ಟದ ಬಳಿಯಿರೋ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಸೇರಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆ. ಅಲ್ಲದೆ ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಇತ್ತ ದೋಸ್ತಿ ಸರ್ಕಾರವನ್ನು ಉಳಿಸಲು ವಿಶ್ವಾಸಮತ ಸಾಬೀತುಪಡಿಸಲು ಸಿಎಂ ಸರ್ಕಸ್ ಮುಂದುವರಿಸಿದ್ದಾರೆ.