ಡಿಸಿಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್- ಸಮಾಲೋಚನೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

Public TV
2 Min Read
CM 2

ಬೆಂಗಳೂರು: ಕೋವಿಡ್ 19 ನಿಯಂತ್ರಣ ಹಾಗೂ ಲಾಕ್ ಡೌನ್ ವಿಷಯಗಳ ಕುರಿತು ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಲಾಯಿತು. ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿ ಇತರ ಕಡೆಗಳಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಯಿತು. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ಧಾನ್ಯಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುವ ಕುರಿತು ಕ್ರಮ ವಹಿಸಲು ಸೂಚಿಸಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳ ಬಯಸಿರುವ ವಲಸೆ ಕಾರ್ಮಿಕರಿಗೆ ಕೆಎಸ್‍ಆರ್ ಟಿಸಿ ಬಸ್ ಗಳಲ್ಲಿ ಒನ್ ವೇ ದರ ಪಾವತಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಿದ್ದು, ಹೊರ ಜಿಲ್ಲೆಗಳಿಂದ ಆಗಮಿಸಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವಂತೆ ತಿಳಿಸಲಾಯಿತು.

ಲಾಕ್ ಡೌನ್ ಸಂದರ್ಭದಲ್ಲಿ ಬೇರೆ ಊರಿನಲ್ಲಿ ಸಿಲುಕಿಕೊಂಡವರು ತಮ್ಮ ಊರಿಗೆ ಅಥವಾ ಕೆಲಸದ ಸ್ಥಳಗಳಿಗೆ ಹಿಂದಿರುಗಲು ಒಂದು ದಿನಕ್ಕೆ ಅಥವಾ ಒಂದು ಬಾರಿಗೆ ಪ್ರಯಾಣಿಸಲು ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ನೀಡಲು ತೀರ್ಮಾನಿಸಲಾಯಿತು. ಇನ್ನು ನೇಕಾರರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

CM 1

ವಿಜಯಪುರ, ಬೆಳಗಾವಿ, ಬಾಗಲಕೋಟೆ, ಮೈಸೂರು, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇದೇ ವೇಳೆ ಸಮಾಲೋಚನೆ ನಡೆಸಲಾಯಿತು.

ಬೆಂಗಳೂರನ್ನು 4 ಝೋನ್‍ಗಳಾಗಿ ವಿಂಗಡಿಸಿ ಕ್ರಮ..?:
ಲಾಕ್ ಡೌನ್ ಪಾರ್ಟ್ 2 ಮುಗಿಯಲು 2 ದಿನ ಬಾಕಿ ಇರುವಂತೆಯೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಲಾಕ್ ಡೌನ್ ವ್ಯಾಪ್ತಿ ಮತ್ತು ಸ್ವರೂಪದಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಿವೆ. ಈ ಮಧ್ಯೆ ರಾಜ್ಯ ಸರ್ಕಾರ ಬೆಂಗಳೂರನ್ನು 4 ಝೋನ್ ಗಳಾಗಿ ವಿಂಗಡಿಸುವ ಸಾಧ್ಯತೆಗಳಿವೆ.

ಕಂಟೈನ್ಮೆಂಟ್ ಏರಿಯಾಗಳಲ್ಲಿ ಕಟ್ಟೆಚ್ಚರ ಹಾಗೂ ಇತರ ಪ್ರದೇಶಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಇನ್ನು ಬೆಂಗಳೂರನ್ನು ನಾಲ್ಕು ಝೋನ್ ಗಳಾಗಿ ವಿಂಗಡಣೆ ಮಾಡಿ ಕ್ರಮ ಕೈಗೊಳ್ಳಲಾಗುವ ಸಾಧ್ಯತೆ ಹೆಚ್ಚಾಗಿದ್ದು, ಕಂಟೈನ್ಮೆಂಟ್ ಏರಿಯಾ, ಸೀಲ್ ಡೌನ್ ಏರಿಯಾ, ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬರುತ್ತಿರುವ ಏರಿಯಾ, ಸಾಮಾನ್ಯ ಏರಿಯಾ ಎಂದು ನಾಲ್ಕು ಝೋನ್ ಗಳಾಗಿ ವಿಂಗಡಿಸಬಹುದು. ಅಲ್ಲದೆ ಆಯಾ ಏರಿಯಾಗಳ ಸ್ಥಿತಿಗತಿಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಬೆಂಗಳೂರಿನಿಂದ ಹೊರ ಹೋದ ಕಾರ್ಮಿಕರಿಗೆ ಕೆಲವು ಊರುಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ನಡೆದಿದೆ ಎಂಬ ಮಾಹಿತಿ ನೀಡಿದ ಸಿಎಂ, ಗುಪ್ತಚರ ಇಲಾಖೆ ವರದಿ ಬಂದಿದೆ. ಇದನ್ನು ಗುರುತಿಸಿ ಸಮಸ್ಯೆ ಬಗೆ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

cm 4

ಕೇಂದ್ರದ ಅಂಗಳದಲ್ಲಿ ಚೆಂಡು..?:
ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರಿಗೆ ವಿನಾಯ್ತಿ ವಿಚಾರದಲ್ಲಿ ಸರ್ಕಾರ ಗೊಂದಲಕ್ಕೆ ಬಿದ್ದದೆ. ಇಡೀ ಬೆಂಗಳೂರು ರೆಡ್ ಝೋನ್ ನಲ್ಲಿರೋದ್ರಿಂದ ಆರ್ಥಿಕ ಪುನಶ್ಚೇತನದ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಬೆಂಗಳೂರನ್ನು ಒಂದೇ ಯೂನಿಟ್ ಬದಲಾಗಿ ವಿಭಾಗವನ್ನಾಗಿ ಮಾಡಲು ರಾಜ್ಯ ಸರ್ಕಾರ ಕೇಂದ್ರದ ಮೊರೆ ಹೋಗಿದೆ ಎನ್ನಲಾಗಿದೆ.

ಬೇರೆ ಜಿಲ್ಲೆಗಳಲ್ಲಿಯಾದರೆ ಇದನ್ನು ಸುಲಭವಾಗಿ ಬಗೆಹರಿಸಬಹುದು. ಆದರೆ ಜನಸಂಖ್ಯೆ ಹೆಚ್ಚಿರುವ ಬೆಂಗಳೂರನ್ನು ವಲಯವನ್ನಾಗಿ ವಿಂಗಡಿಸಿ ವಿನಾಯ್ತಿ ಕೊಡುವಂತೆ ಕೇಂದ್ರದ ಮೊರೆ ಹೋಗಲಾಗಿದೆ. ಇಡೀ ರಾಜ್ಯದ ಆರ್ಥಿಕ ಪರಿಸ್ಥಿತಿಯ ಹಬ್ ಬೆಂಗಳೂರು ಆಗಿದ್ದು, ಈ ವಾದವನ್ನು ಮುಂದಿಟ್ಟು ರಾಜ್ಯ ಸರ್ಕಾರವು ಕೇಂದ್ರದ ಅಂಗಳಕ್ಕೆ ಚೆಂಡು ಎಸೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *