ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 1.96 ಕೋಟಿ ರೂ. ಮೌಲ್ಯದ ಚಿನ್ನವನ್ನು ಜಪ್ತಿಮಾಡಿದ್ದಾರೆ.
ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದುಬೈನಿಂದ ಬಂದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್‍ಗಳಲ್ಲಿ ಪೇಸ್ಟ್ ರೀತಿ ಚಿನ್ನವನ್ನು ಅಕ್ರಮವಾಗಿ ಅಡಗಿಸಿಟ್ಟುಕೊಂಡಿರುವುದು ಪತ್ತೆಯಾಗಿದೆ. ನಾಲ್ಕು ಜನ ಪ್ರಯಾಣಿಕರ ಬಳಿ ಬರೋಬ್ಬರಿ 2 ಕೆಜಿ 864 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.