ಬೆಂಗಳೂರು: ಕೆ.ಆರ್.ನಗರ ಸಂತ್ರಸ್ತೆಯನ್ನು ಅಪಹರಣ (Kidnap Case) ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಲ್ಲಿರುವ ಮಾಜಿ ಮಂತ್ರಿ ಹೆಚ್‌ಡಿ ರೇವಣ್ಣಗೆ (HD Revanna) ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು (Bail) ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ 6:30ಕ್ಕೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಜೆಯಾದ ಕಾರಣ ಕೋರ್ಟ್ ಷರತ್ತುಗಳನ್ನು ಪೂರೈಸಲು ಆಗಲಿಲ್ಲ. ಹೀಗಾಗಿ ನಾಳೆ ಬೆಳಗ್ಗೆ ಕೋರ್ಟ್ ಕಲಾಪ ಶುರುವಾದ ನಂತರ ಜಾಮೀನು ಷರತ್ತುಗಳನ್ನು ಪೂರೈಸಿದ ನಂತರ ಪರಪ್ಪನ ಅಗ್ರಹಾರ ಜೈಲಿಂದ ಹೆಚ್‌ಡಿ ರೇವಣ್ಣ ರಿಲೀಸ್ ಆಗಲಿದ್ದಾರೆ. ಇದರೊಂದಿಗೆ ರೇವಣ್ಣ ಅವರ ಆರು ದಿನಗಳ ಜೈಲುವಾಸ ಅಂತ್ಯವಾಗಲಿದೆ.
- Advertisement
ವಿಚಾರಣೆ ವೇಳೆ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ ಕ್ರಮವನ್ನು ರೇವಣ್ಣ ಪರ ವಕೀಲರು ಆಕ್ಷೇಪಿಸಿದರು. ಕೊನೆಗೆ ಜಡ್ಜ್ ಸೂಚನೆ ಮೇರೆಗೆ ತನಿಖಾ ವರದಿಯ ಪ್ರತಿಯನ್ನು ರೇವಣ್ಣ ಪರ ವಕೀಲರಿಗೆ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ನೀಡಿದರು. ಇದನ್ನೂ ಓದಿ: ಹೇಮಂತ್ ಸೊರೆನ್ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ
- Advertisement
ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಎಸ್‌ಪಿಪಿ ಪ್ರಬಲ ವಾದ ಮಂಡಿಸಿದರು. ಯಾಕೆ ಜಾಮೀನು ನೀಡಬಾರದು ಎಂಬುದನ್ನೆಲ್ಲಾ ವಿವರಿಸಿದರು. ಇದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ರು. ಯಾವ ಯಾವ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಪ್ರತಿವಾದ ಮಂಡಿಸಿದರು. ಇದನ್ನೆಲ್ಲಾ ಆಲಿಸಿದ ಜಡ್ಜ್, ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ಈ ಬೆನ್ನಲ್ಲೇ ಜೈಲ್ ಮುಂದೆ ಕಾದು ನಿಂತಿದ್ದ ರೇವಣ್ಣ ಅಭಿಮಾನಿಗಳು ಸಂಭ್ರಮಿಸಿದರು. ಹೊಳೆನರಸೀಪುರದಲ್ಲೂ ಸಂಭ್ರಮ ಕಂಡುಬಂತು.
ಏನೇನು ಷರತ್ತುಗಳು ಅನ್ವಯ?
– 5 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ
– ಕೆಆರ್ ನಗರ ಪ್ರವೇಶ ಮಾಡಬಾರದು
– ಸಾಕ್ಷಿಗಳ ಮೇಲೆ ಒತ್ತಡ ಹೇರಬಾರದು
– ಎಸ್‌ಐಟಿ ತನಿಖೆಗೆ ಸಹಕಾರ ನೀಡಬೇಕು
ಎಸ್‌ಐಟಿ ವಾದ ಏನಿತ್ತು?
ದೂರು ನೀಡುತ್ತಾರೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ಅಪಹರಿಸಿದ್ದರು. ಇದು ಇತರೆ ಸಂತ್ರಸ್ತೆಯರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಸಂತ್ರಸ್ತೆ 164 ಹೇಳಿಕೆ ದಾಖಲು ಮಾಡಿದ್ದಾರೆ. ಈಗಾಗಲೇ ಸಹ ಆರೋಪಿಗಳು ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಅಪರಾಧ ಕೃತ್ಯದ ಗಂಭೀರತೆ ಪರಿಗಣಿಸಿ ಜಾಮೀನು ನಿರಾಕರಿಸಿ. ಜಾಮೀನು ನೀಡಿದರೆ ಸಾಕ್ಷ್ಯನಾಶ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು.
ಆರೋಪಿ ಪರ ವಾದ ಏನು?
ಸಂತ್ರಸ್ತೆಯ ಮೇಲೆ ಯಾವುದೇ ಮಾರಣಾಂತಿಕ ಹಲ್ಲೆ ಆಗಿಲ್ಲ. ಮಹಿಳೆಗೆ ಯಾವುದೇ ತೊಂದರೆ ನೀಡಿಲ್ಲ. ಗಾಯಗೊಳಿಸಿಲ್ಲ. ಈ ಕೇಸಲ್ಲಿ ಯಾರಿಗೆ? ಯಾರು ಬೇಡಿಕೆ ಇಟ್ಟಿದ್ದಾರೆ? ಒಬ್ಬರನ್ನ ತಮ್ಮ ವಶದಲ್ಲಿ ಇಟ್ಟುಕೊಳ್ಳುವುದು ತಪ್ಪಲ್ಲ. ಒತ್ತೆಯಾಳಾಗಿಸಿಕೊಂಡು ದೌರ್ಜನ್ಯ, ಕಿರುಕುಳ ನೀಡುವುದು ಮಾತ್ರ ಅಪರಾಧ. ಇಲ್ಲಿ ಮೇಲ್ನೋಟಕ್ಕೆ ಅಂತಹ ಯಾವುದೇ ಕೃತ್ಯ ನಡೆಸಿದ್ದಕ್ಕೆ ಸಾಕ್ಷಿಗಳಿಲ್ಲದ ಕಾರಣ ಜಾಮೀನು ನೀಡಬಹುದು.