ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ

Public TV
1 Min Read
Goa Murder

ಪಣಜಿ: ಗೆಳತಿಯನ್ನು ಮದುವೆಯಾಗಲೆಂದು ಬೆಂಗಳೂರಿನಿಂದ (Bengaluru) ಗೋವಾಕ್ಕೆ ಕರೆದುಕೊಂಡು ಹೋಗಿ ಪ್ರಿಯಕರ ಆಕೆಯ ಗಂಟಲು ಸೀಳಿ ಕೊಲೆ ಮಾಡಿರುವ ಘಟನೆ ಗೋವಾದ (Goa) ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಬೆಂಗಳೂರಿನ ರೋಶ್ನಿ ಮೋಸೆಸ್ (22) ಮೃತ ದುರ್ದೈವಿ. ಪ್ರಿಯಕರ ಸಂಜಯ್ ಕೆವಿನ್ (22) ಹತ್ಯೆಗೈದ ಆರೋಪಿ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್

ಬೆಂಗಳೂರಿನ ನಿವಾಸಿಗಳಾಗಿರುವ ಇವರಿಬ್ಬರು 5 ವರ್ಷಗಳಿಂದ ಸಂಬಂಧ ಹೊಂದಿದ್ದರು. ಭಾನುವಾರ (ಜೂ. 25)ರಂದು ಮದುವೆಯಾಗಲೆಂದು ಗೋವಾಗೆ ಬಸ್‌ನಲ್ಲಿ ತೆರಳಿದ್ದರು. ಈ ವೇಳೆ ಇವರಿಬ್ಬರ ನಡುವೆ ಇದ್ದಕ್ಕಿದ್ದಂತೆ ಜಗಳ ನಡೆದಿತ್ತು. ಬಳಿಕ ಗೋವಾದ ಪಿಲಿಯೆಮ್-ಧರ್ಬಂದೋರಾದಲ್ಲಿ ಇಬ್ಬರು ಬಸ್‌ನಿಂದ ಇಳಿದಿದ್ದರು. ಸಂಜಯ್, ರೋಶ್ನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ, ಚಾಕುವಿನಿಂದ ಆಕೆಯ ಗಂಟಲು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

ಸೋಮವಾರ ಬೆಳಗ್ಗೆ ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಶವ ಪರಿಶೀಲನೆ ನಡೆಸುವ ವೇಳೆ ಮಹಿಳೆಯ ಪರ್ಸ್ನಲ್ಲಿ ಹುಬ್ಬಳ್ಳಿಯಿಂದ ಬಸ್ ಹತ್ತಿದ ಟಿಕೆಟ್ ಲಭ್ಯವಾಗಿತ್ತು. ಬಳಿಕ ಪೊಲೀಸರಿಗೆ ಸಿಕ್ಕ ಫೋಟೋ ಹಾಗೂ ದಾಖಲೆಗಳಿಂದ ಮೃತಪಟ್ಟಿರುವ ಯುವತಿ ಬೆಂಗಳೂರಿನ ರೋಶ್ನಿ ಎಂದು ಪತ್ತೆಯಾಗಿದೆ. ಅಲ್ಲದೇ ರೋಶ್ನಿ, ಸಂಜಯ್‌ನನ್ನು ಪ್ರೀತಿಸುತ್ತಿದ್ದ ವಿಚಾರವು ತನಿಖೆ ವೇಳೆ ಪೊಲೀಸರಿಗೆ ತಿಳಿದಿತ್ತು. ಇದನ್ನೂ ಓದಿ: Uttar Pradesh | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಬೆಂಕಿ – ಐವರು ಸಜೀವ ದಹನ

ಸಂಜಯ್ ಪತ್ತೆಗಾಗಿ ಬಲೆಬೀಸಿದ ಪೊಲೀಸರು ಹುಬ್ಬಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Share This Article