– ರಾಜ್ಯದಲ್ಲಿ 51ಕ್ಕೇರಿದ ಕೊರೊನಾ ಪೀಡಿತರ ಸಂಖ್ಯೆ
ಬೆಂಗಳೂರು: ಇಂದು ಹತ್ತು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇಂದಿಗೆ ಒಟ್ಟು ಕೊರೊನಾ ಪಾಸಿಟಿವ್ ಸಂಖ್ಯೆ 51 ಏರಿಕೆಯಾಗಿದೆ. ಮಂಗಳವಾರ 41 ಇತ್ತು, ರಾತ್ರಿ ಒಳಗೆ ಎಷ್ಟಾಗತ್ತೊ ಗೊತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಚಿಕಿತ್ಸೆ ಮತ್ತು ಪರೀಕ್ಷೆಗೆ ಎಲ್ಲಿ ವ್ಯವಸ್ಥೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿ ಹೇಗೆ ಕೆಲಸ ಮಾಡಬೇಕು? ಅವರಿಗೆ ವಿಶ್ರಾಂತಿ ಕೊಡೋದು ಹೇಗೆ? ರಾಜ್ಯವ್ಯಾಪಿ ಹೇಗೆ ಮುಂಜಾಗ್ರತೆ ಕೈಗೊಳ್ಳಬೇಕು? ಹೊಸ ಹೊಸ ಕಟ್ಟಡ ಹಾಗೂ ಯಾವ ಯಾವ ಹೋಟೆಲ್‍ಗಳನ್ನು ಚಿಕಿತ್ಸೆಗಾಗಿ ಪಡೆಯಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸಾವಾಗಿರುವ ಮಹಿಳೆ ರಿಸಲ್ಟ್ ಬರಬೇಕಿದೆ. ಮೊದಲ ವರದಿಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎರಡನೇ ವರದಿ ಇನ್ನೂ ಬರಬೇಕಿದೆ. ಒಂದು ವೇಳೆ ಕೊರೊನಾದಿಂದ ಸಾವನ್ನಪ್ಪಿದ್ದರೆ ಅಗತ್ಯ ಕ್ರಮವಹಿಸಿ ಅಂತ್ಯಸಂಸ್ಕಾರ ಮಾಡುತ್ತೇವೆ. ಅವರನ್ನು ಸುಟ್ಟು ಹಾಕಿದರೆ ಉತ್ತಮ, ಆದರೆ ಕೆಲವು ಸಮುದಾಯದಲ್ಲಿ ಸಂಪ್ರದಾಯ ಇರುತ್ತವೆ. ಹೀಗಾಗಿ ಎಂಟು ಅಡಿ ಆಳದಲ್ಲಿ ಹೂಳಬೇಕು ಎಂದು ಮಾಹಿತಿ ನೀಡಿದರು.
21 ದಿನಗಳು ಅನೇಕರಿಗೆ ತೊಂದರೆಯಾಗುತ್ತೆ. ಈ ತೊಂದರೆಯನ್ನು ನಾವು ನಮ್ಮ ರಕ್ಷಣೆಗೋಸ್ಕರ ತಡೆದುಕೊಳ್ಳಬೇಕು. ಕೆಲವರು ಬೇರೆ ದೇಶದಿಂದ ವೈರಸ್ ತೆಗೆದುಕೊಂಡ ನಮ್ಮಲ್ಲಿಗೆ ಬಂದಿದ್ದಾರೆ. ಇದರಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಬಂದ್ ಅನಿವಾರ್ಯವಾಗಿದೆ. ಆದ್ದರಿಂದ ಜನರು ಇದಕ್ಕೆ ಸಹಕಾರ ಕೊಡಬೇಕು. ಜನರಿಗೆ ಅಗತ್ಯ ದಿನಸಿ ಖರೀದಿಗೆ ಸಮಯ ನಿಗದಿ ಬಗ್ಗೆ ಸಿಎಸ್ ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸುಧಾಕರ್ ಹೇಳಿದ್ದಾರೆ.
ಕ್ವಾರಂಟೈನ್‍ಗೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಸಿದ್ಧತೆ ಮಾಡಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಪಾಸಿಟಿವ್ ಪ್ರಕರಣಗಳು ಬಂದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಹೋಟೆಲ್ ಹಾಗೂ ಹೊಸ ಕಟ್ಟಡಗಳನ್ನು ತೆಗೆದುಕೊಂಡು ಚಿಕಿತ್ಸೆಗೆ ಸಿದ್ಧತೆಗೊಳಿಸಬೇಕಾಗಿದೆ. ಚಿಕಿತ್ಸೆ ಅಥವಾ ಪರೀಕ್ಷೆಗೆ ಬಂದವರನ್ನು ವಿಕ್ಟೋರಿಯಾದಲ್ಲಿ ಇಡುಬೇಕಾ? ಎಲ್ಲಿ ಇಡೋದು ಎಂದು ಸಭೆ ಮಾಡಿದ್ದೇವೆ. ನಾವು ಸಿಬ್ಬಂದಿಯ ಬಗ್ಗೆಯೂ ಕೇರ್ ಮಾಡಬೇಕಿದೆ ಎಂದರು.
ಕೊರೊನಾ ವಿಚಾರವಾಗಿ ಮನೆಯಲ್ಲೇ ಇರಿ ಎಂದು ಹೇಳಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ. ಆದರೆ ಆ ತೊಂದರೆ ನಮ್ಮ ಒಳ್ಳೆಯದಕ್ಕೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನೆಮಗೆಲ್ಲರಿಗೂ ತೊಂದರೆ ಆಗದ ರೀತಿಯಲ್ಲಿ ನಾವು ಮುಂದೆ ಕೆಲಸ ಮಾಡಬೇಕಿದೆ. ನಿಮಗೆಲ್ಲರಿಗೂ ಬೇಕಾದ ಸಮಯದಲ್ಲಿ ಊಟ, ಔಷಧಿ ಸಿಗುವಂತ ರೀತಿಯಲ್ಲಿ ನಾವು ಕ್ರಮಕೈಗೊಳ್ಳಬೇಕು. ನಮ್ಮಿಂದ ಮತ್ತು ಸರ್ಕಾರದಿಂದ ತೊಂದರೆಯಾಗಿದ್ದರೆ ನಾನು ಕ್ಷೆಮೆ ಕೇಳುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.
ನಾನು ಇಲ್ಲಿ ಮಂತ್ರಿ ಅಥವಾ ಶಾಸಕ ಎಂದು ಕೆಲಸ ಮಾಡುತ್ತಿಲ್ಲ. ನಾನೊಬ್ಬ ವೈದ್ಯನಾಗಿ ಈ ರಾಜ್ಯದ ಪೌರನಾಗಿ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು ಕೊರೊನಾ ವೈರಸ್ ಅನ್ನು ತಡೆಗಟ್ಟಲು ನನ್ನ ಕೈಮೀರಿ ಕೆಲಸ ಮಾಡುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಬೇಕು ಎಂದು ನಾನು ಸಿಎಂ ಯಡಿಯೂರಪ್ಪ ಅವರಿಗೇ ಹೇಳಿದ್ದೇನೆ. ಇದರ ಜವಾಬ್ದಾರಿ ಯಾರೇ ತೆಗೆದುಕೊಂಡರು ನಾನು ಕೆಲಸ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.