ಬೆಂಗಳೂರು: ಹೆತ್ತ ಕೂಡಲೇ ತಾಯಿ ಹಾಗೂ ಮಗುವನ್ನು ಕೊರೊನಾ ವೈರಸ್ ಬೇರ್ಪಡಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಮಗುವಿಗೆ ಕೋವಿಡ್-19 ನೆಗೆಟಿವ್ ಎಂದು ವರದಿ ಬಂದಿದೆ.
ಪುಟ್ಟ ಕಂದಮ್ಮನ ಅಪ್ಪ- ಅಮ್ಮ ಇಬ್ಬರಿಗೂ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತಾಯಿ ಬಳಿ ಬಿಟ್ಟಿಲ್ಲ.
ಪತಿಗೆ ಕೊರೊನಾ ಇದ್ದಿದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ಹಾಗೂ ನರ್ಸ್ ಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ.
ಆಘಾತಕಾರಿ ವಿಚಾರವೆಂದರೆ ಪತಿ ಹಾಗೂ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಸರ್ಜರಿ ಮಾಡಿದ್ದಾರೆ. ಡೆಲಿವರಿ ಮಾಡಿಸಿದ ಮೇಲೆ ಕೊರೊನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.
ಘಟನೆಯಿಂದ ಆಸ್ಪತ್ರೆ ಸುತ್ತಮುತ್ತ ಬರೋಬ್ಬರಿ 3 ಬಾರಿ ಔಷಧಿ ಸಿಂಪಡನೆ ಮಾಡುವ ಮೂಲಕ ಆಸ್ಪತ್ರೆ ಪಕ್ಕದ ಕಟ್ಟಡ ವಾಸಿಗಳ ಮೇಲೂ ನಿಗಾ ವಹಿಸಲಾಗಿದೆ. ಪದೇ ಪದೇ ಸಹಾಯವಾಣಿ ಕರೆ ಮಾಡಿ ಸುರಕ್ಷತಾ ಕ್ರಮಗಳ ಬಗ್ಗೆ ಜನರು ಮಾಹಿತಿ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಇಲಾಖಾ, ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಗಳ ಬಗ್ಗೆ ನಿಗಾ ಇರಿಸಿದ್ದಾರೆ.