ಬೆಂಗಳೂರು: ಚುನಾವಣಾ ಸಮಯದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿ (Congress Guarantee) ಯೋಜನೆ ಜಾರಿ ಸಂಬಂಧ ಹಣ ಹೊಂದಿಸಲು ತಲೆಕೆಡಿಸಿಕೊಂಡಿರುವ ಸರ್ಕಾರಕ್ಕೆ ಬೆಂಗಳೂರಿನ ಗುತ್ತಿಗೆದಾರರ ಸಂಘ ಶಾಕ್ ನೀಡಿದೆ.
ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರ ಹೊಸ ಟೆಂಡರ್ ಹಾಗೂ ಕಾಮಗಾರಿಗೆ ತಡೆ ನೀಡಿತ್ತು. ತಡೆ ನೀಡಿದ ಬೆನ್ನಲ್ಲೇ ಬೆಂಗಳೂರು ವ್ಯಾಪ್ತಿಯ ಕಸ ವಿಲೇವಾರಿ ಸೇರಿದಂತೆ ಎಲ್ಲಾ ವಲಯಗಳ ಚಾಲ್ತಿಯಲ್ಲಿರುವ ಕಾಮಗಾರಿ ಕೆಲಸ ಸ್ಥಗಿತ ಮಾಡುವುದಾಗಿ ಗುತ್ತಿಗೆದಾರರ ಸಂಘ (Contractors Union) ಎಚ್ಚರಿಕೆ ನೀಡಿದೆ.
ಪಾಲಿಕೆಯ ಎಲ್ಲ ಎಂಟು ವಲಯಗಳ ಮುಖ್ಯ ಇಂಜಿನಿಯರ್‌ಗಳಿಗೆ (Chief Engineer) ಪತ್ರ ಬರೆದಿರುವ ಸಂಘ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ ಅನುದಾನದಲ್ಲಿ ಬಿಡುಗಡೆಯಾದ ಒಟ್ಟು 650 ಕೋಟಿ ರೂ. ಹಣ ಇಲ್ಲಿಯವರೆಗೂ ಗುತ್ತಿಗೆದಾರರ ಕೈ ಸೇರಿಲ್ಲ. ಏಪ್ರಿಲ್ 2021ರಿಂದ ಮೇ 2023ರವರೆಗಿನ ನಡೆಸಿದ ಕಾಮಗಾರಿಗಳ ಬಿಲ್ ಬಾಕಿಯಿದೆ. ಅಷ್ಟೇ ಅಲ್ಲದೇ ಎಲ್‌ಒಸಿ ಬಿಡುಗಡೆಯಾಗಿರುವ ಕಾಮಗಾರಿಗಳ ಪಾವತಿಗಳನ್ನೂ ಸಹ ತಡೆ ಹಿಡಿಯಲಾಗಿದೆ. ಒಂದು ವೇಳೆ ಹಣ ಬಿಡುಗಡೆ ಮಾಡದೇ ಹೋದರೆ ಬೆಂಗಳೂರಿನ ಎಲ್ಲ ಕಾಮಗಾರಿ ಹಾಗೂ ಕೆಲಸ ತಡೆ ಹಿಡಿಯುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: Odisha Train Tragedy – ವಿಚಾರಣೆ ಎದುರಿಸಿದ್ದ ಜ್ಯೂನಿಯರ್ ಎಂಜಿನಿಯರ್ ನಾಪತ್ತೆ
ಒಂದು ವೇಳೆ ಬಿಲ್ ಕ್ಲೀಯರ್ ಮಾಡದೇ ಇದ್ದರೆ ಜೂನ್ 29 ರಿಂದ ಬಿಬಿಎಂಪಿ (BBMP) ಎಂಟು ವಲಯದ ಕೆಲಸ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದೆ. ಈ ಮೂಲಕ ಫ್ರೀಂ ಸ್ಕೀಂ ಜಾರಿ ಬಗ್ಗೆ ತಲೆ ಕೆಡಿಸಿಕೊಂಡಿರುವ ಸರ್ಕಾರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ಮುಷ್ಕರದ ಶಾಕ್ ನೀಡಿದೆ.