– 4 ದಿನಗಳ ನಂತ್ರ ಶವ ಪತ್ತೆ
ಬೆಂಗಳೂರು: ಕಂಟೇನರ್ ಲಾರಿ ಕೆಳಗೆ ಸಿಲುಕಿದ್ದ ಚಾಲಕನ ಮೃತದೇಹ ನಾಲ್ಕು ದಿನಗಳ ಬಳಿಕ ಪತ್ತೆಯಾದ ಘಟನೆ ಬೆಂಗಳೂರಿನ ವೈಟ್‍ಫೀಲ್ಡ್ ನ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಮೂಲದ ಹನುಮಂತ ಎಂಬ ಕಂಟೇನರ್ ಚಾಲಕ ಮೃತಪಟ್ಟಿದ್ದಾನೆ. ಕಳೆದ ಹಲವು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹನುಮಂತ, ಶುಕ್ರವಾರ ಸಂಜೆ ತಾನು ಕೊಂಡೊಯ್ಯಬೇಕಾದ ಕಂಟೇನರ್ ನಂಬರ್ ನೋಡಲು ತೆರಳಿದ್ದನು.
ಇದು ಗೊತ್ತಿಲ್ಲದೇ ಹನುಮಂತ ನಿಂತಿದ್ದ ಜಾಗದಲ್ಲೇ ಮತ್ತೊಬ್ಬ ಚಾಲಕ ಕಂಟೇನರ್ ಇಳಿಸಿದ್ದಾನೆ. ಸಿಬ್ಬಂದಿಗೆ ಹನುಮಂತ ಕಂಟೇನರ್ ಅಡಿ ಸಿಲುಕಿರುವುದು ಅರಿವಿಗೆ ಬಂದಿರಲಿಲ್ಲ. ಪರಿಣಾಮ ಅದರಡಿ ಸಿಲುಕಿ ಹನುಮಂತ ಮೃತಪಟ್ಟಿದ್ದಾನೆ.
ಇದಾದ ನಾಲ್ಕು ದಿನಗಳ ಬಳಿಕ ಮತ್ತೊಬ್ಬ ಸಿಬ್ಬಂದಿ ಕಂಟೇನರ್ ತೆಗೆದ ವೇಳೆ ಹನುಮಂತನ ಮೃತದೇಹ ಪತ್ತೆಯಾಗಿದೆ. ಕೂಡಲೇ ಕಾಡುಗೋಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿಚಾರ ತಿಳಿದ ನೂರಕ್ಕೂ ಅಧಿಕ ಚಾಲಕರು ಸ್ಥಳಕ್ಕೆ ದೌಡಾಯಿಸಿದರು. ಆತನ ಸಾವಿನ ಹಿಂದೆ ಸಿಬ್ಬಂದಿಯ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.