ಬೆಂಗಳೂರು: ಉಪ ಚುನಾವಣೆಯ ಸೋಲಿನಿಂದ ವಿಪಕ್ಷ ಹಾಗೂ ಸಿಎಲ್ ಪಿ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ ರಾಜಕೀಯ ಸನ್ಯಾಸದ ಯೋಚನೆ ಮಾಡಿದ್ದರು. ಆದರೆ 10 ದಿನ ಕಳೆದು ಭೇಟಿಗೆ ರಾಹುಲ್ ಗಾಂಧಿ ಆಸಕ್ತಿ ತೋರಿರುವುದರಿಂದ ಸಿದ್ದರಾಮಯ್ಯರಿಗೆ ಹೊಸ ಭರವಸೆ ಶುರುವಾಗಿದೆ.
ಸಿದ್ದರಾಮಯ್ಯ ಬಗ್ಗೆ ಹೆಚ್ಚು ಆತ್ಮೀಯತೆ. ಅಷ್ಟೇ ವಿಶ್ವಾಸ ಹೊಂದಿರುವ ರಾಹುಲ್ ಗಾಂಧಿ ಮಧ್ಯ ಪ್ರವೇಶದಿಂದ ಸಿದ್ದರಾಮಯ್ಯಗೆ ಮತ್ತೊಮ್ಮೆ ಅದೃಷ್ಟ ಕುಲಾಯಿಸಬಹುದು. ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನ ಎರಡರಲ್ಲೂ ಮುಂದುವರಿಯಲು ಸಿದ್ದರಾಮಯ್ಯರನ್ನ ಬೆಂಬಲಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಸೋನಿಯಗಾಂಧಿಗೆ ಸಿದ್ದರಾಮಯ್ಯ ಮೇಲಿರುವ ಅಪನಂಬಿಕೆಯನ್ನು ಹೋಗಲಾಡಿಸಿ ತನ್ನ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ನಿರೀಕ್ಷೆ ನಿಜವಾದರೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಪವರ್ ಫುಲ್ ಆಗಿ ಹೊರಹೊಮ್ಮುವುದು ಗ್ಯಾರಂಟಿಯಾಗುತ್ತದೆ.
ಉಪಚುನಾವಣೆಯ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ, 15 ಕ್ಷೇತ್ರಗಳಲ್ಲಿ 2 ಕ್ಷೇತ್ರದಲ್ಲಿ ಮಾತ್ರ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಉಪಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ತಮ್ಮ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು.