ಬೆಂಗಳೂರು: ರಾಜ್ಯ ಕಾಂಗ್ರೆಸ್ ಅಂತರ್ ಯುದ್ಧಕ್ಕೆ ಈಗ ದೆಹಲಿಯೇ ಅಖಾಡವಾಗಿದೆ. ಇಷ್ಟು ದಿನ ಇಲ್ಲಿಯೇ ಕಚ್ಚಾಡುತ್ತಿದ್ದ ಹಾಗೂ ತಮ್ಮ ತಮ್ಮಲ್ಲಿಯೇ ಕತ್ತಿ ಮಸೆಯುತ್ತಿದ್ದವರು ಇದೀಗ ದೆಹಲಿ ಅಖಾಡದಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
60 ಸೈನಿಕ ಬಲದೊಂದಿಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ದೆಹಲಿ ಅಖಾಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆಯಿಂದ 10 ದಿನಗಳ ಕಾಲ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯ ಕೈ ನಾಯಕರ ಜೊತೆ ಇಂದೇ ಮಾತುಕತೆಗೆ ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ನಾಯಕನ ಸ್ಥಾನದ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಸಿದ್ದರಾಮಯ್ಯ ದೆಹಲಿಗೆ ತಲುಪಿದ್ದು ಅವರಿಗಿಂತಲೂ ಮೊದಲೇ ಸಿದ್ದರಾಮಯ್ಯ ಬೆಂಬಲಿತ 60 ಮುಖಂಡರುಗಳು ದೆಹಲಿ ತಲುಪಿದ್ದಾರೆ. ಹೀಗೆ 60 ಬೆಂಬಲಿಗರ ಲಾಬಿ ಮೂಲಕ ವಿಪಕ್ಷ ಹಾಗೂ ಸಿಎಲ್ ಪಿ ಎರಡು ನಾಯಕನ ಸ್ಥಾನವನ್ನ ತಾವೇ ಪಡೆಯುವುದು ಸಿದ್ದರಾಮಯ್ಯ ಗುರಿ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ತಮ್ಮ ಆಪ್ತರಿಗೆ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರ ಬಲಾಬಲ ಏನೇ ಇದ್ದರೂ ಹೈಕಮಾಂಡ್ ಕೃಪಕಟಾಕ್ಷ ಸಿಕ್ಕವರಿಗೆ ಅವಕಾಶ ಅನ್ನೋದು ಕೈ ನಾಯಕರ ನಂಬಿಕೆಯಾಗಿದೆ. ಒಟ್ಟಾರೆ ಕೆಪಿಸಿಸಿಗೆ ಯಾರು ಅಧಿಪತಿ. ವಿಪಕ್ಷ ಹಾಗೂ ಸಿಎಲ್‍ಪಿಗೆ ಯಾರು ನಾಯಕ ಎಂಬ ಈ ಎಲ್ಲಾ ಕುತೂಹಲಕ್ಕೆ ಬಹುತೇಕ ಇಂದೇ ತೆರೆ ಬೀಳಲಿದೆ.