ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇತ್ತಿಚೆಗೆ ರೋಷನ್ ಬೇಗ್ ನಡೆಸಿದ್ದ ಪಕ್ಷ ವಿರೋಧಿ ಚಟುವಟಿಕೆಗಳ ಮಾಹಿತಿ ಸಹಿತ ಅವರ ವಿರುದ್ಧದ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಪದೇ ಪದೇ ಸಮ್ಮಿಶ್ರ ಸರ್ಕಾರ ಹಾಗೂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಪಕ್ಷಕ್ಕೂ ಮುಜುಗರ ಉಂಟು ಮಾಡಿದ್ದರು. ಇದೆಲ್ಲವನ್ನು ದಾಖಲೆ ಸಹಿತ ಹೈಕಾಮಾಂಡ್ ಗೆ ದೂರು ನೀಡಲಾಗಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಈ ಮೊದಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಕೆಪಿಸಿಸಿ ನೀಡಿದ ನೋಟಿಸ್‍ಗೆ ಕೂಡ ರೋಷನ್ ಬೇಗ್ ಉತ್ತರ ನೀಡಿರಲಿಲ್ಲ. ಈ ಎಲ್ಲಾ ವಿಷಯವನ್ನು ಒಳಗೊಂಡ ದೂರು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಬೇಗ್ ಅವರು ಎಐಸಿಸಿ ಸದಸ್ಯರು ಕೂಡ ಆಗಿರುವುದರಿಂದ ಎಐಸಿಸಿಯೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹೊರತು ಕೆಪಿಸಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನು ಅರಿತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರು ಸೇರಿ ರೋಷನ್ ಬೇಗ್ ಅವರನ್ನ ಹಣಿಯಲು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ತನ್ನ ವಿರುದ್ಧ ಮಾತನಾಡಿದ ಕೋಪ ಸಿದ್ದರಾಮಯ್ಯನವರಿಗೆ ಇದ್ದರೆ ಅಯೋಗ್ಯ ಅಂದ ಸಿಟ್ಟು ದಿನೇಶ್ ಗುಂಡೂರಾವ್ ಅವರಿಗಿದೆ. ಆದ್ದರಿಂದ ಇಬ್ಬರು ನಾಯಕರು ಸೇರಿ ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಸದ್ದಿಲ್ಲದೆ ಎಐಸಿಸಿಯೇ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಡಿದ್ದಾರೆ. ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಸೇರಿ ಶಿಫಾರಸು ಮಾಡಿದ ರೋಷನ್ ಬೇಗ್ ವಿರುದ್ಧದ ಶಿಸ್ತುಕ್ರಮ ಜಾರಿಯಾಗುತ್ತಾ ಅಥವಾ ರೋಷನ್ ಬೇಗ್ ಅವರ ಎಐಸಿಸಿ ಮಟ್ಟದ ಸಂಪರ್ಕ ಅವರನ್ನ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕು.