ಬೆಂಗಳೂರು: ಮಂಗಳೂರಿನ ಗೋಲಿಬಾರ್ ನಲ್ಲಿ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಹಾಗೂ ಅಲ್ಲಿನ ಪರಿಸ್ಥಿತಿ ಅವಲೋಕನಕ್ಕೆ ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೊರಟಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಮೀರ್ ಅಹಮ್ಮದ್ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಲಿದ್ದಾರೆ. ಮಾಜಿ ಸಚಿವರಾದ ರಮೇಶ್ ಕುಮಾರ್, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ನಜೀರ್ ಅಹಮ್ಮದ್, ಬಸವರಾಜ ರಾಯರೆಡ್ಡಿ ನಿಯೋಗ ಪ್ರತ್ಯೇಕ ತಂಡವಾಗಿ ಮಂಗಳೂರಿಗೆ ಹೊರಟಿದೆ.
ಬಹುತೇಕ ಕಾಂಗ್ರೆಸ್ ನಿಯೋಗವನ್ನ ಮಂಗಳೂರು ಏರ್ ಪೋರ್ಟ್ ನಲ್ಲಿಯೇ ಪೊಲೀಸರು ವಶಕ್ಕೆ ಪಡೆದು ವಾಪಸ್ ಕಳುಹಿಸುವ ಸಾಧ್ಯತೆ ಇದೆ. ಇದನ್ನೂ ಓದಿ: 7 ಸಾವಿರ ಉದ್ರಿಕ್ತರಿಂದ ಠಾಣೆಗೆ ಮುತ್ತಿಗೆ – ಆತ್ಮರಕ್ಷಣೆಗಾಗಿ ಪೊಲೀಸ್ ಫೈರಿಂಗ್
ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಅಮಾಯಕರು ಪ್ರಾಣಬಿಟ್ಟಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರ ಪರಿಣಾಮ ಮಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೇ ಕರ್ಫ್ಯೂ ಜಾರಿ ಮಾಡಲಾಗಿದ್ದು, ಇಂದು ಶಾಲಾ-ಕಾಲೇಜುಗಳಿಗೆ ರಜೆ ನಿಡಲಾಗಿದೆ. ಅಲ್ಲದೆ 48 ಗಂಟೆಗಳ ಕಾಲ ಇಂಟರ್ನೆಟ್ ಕೂಡ ಸ್ಥಗಿತಗೊಳಿಸಲಾಗಿದೆ.