Connect with us

Bengaluru City

ರಮೇಶ್ ಆಯ್ತು, ಈಗ ಸತೀಶ್ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸೆಣಸು!

Published

on

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಯನ್ನೇ ಖತಂಗೊಳಿಸಿದ್ದ ಸಮಸ್ಯೆ ಮತ್ತೊಮ್ಮೆ ಸುಂಟರಗಾಳಿಯಂತೆ ತಲೆ ಎತ್ತುತ್ತಾ ಅನ್ನೋ ಪ್ರಶ್ನೆಯೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ.

ಹೌದು. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಗೆ ಸೆಡ್ಡು ಹೊಡೆಯಲು ಹೋದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಮತ್ತೆ ಕಾಂಗ್ರೆಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಮೇಶ್ ಜಾತಕಿಹೊಳಿ ಹಾಗೂ ಲಕ್ಷ್ಮಿ ನಡುವಿನ ಕದನ ಸಮ್ಮಿಶ್ರ ಸರ್ಕಾರವನ್ನೇ ಪತನಗೊಳಿಸುವ ಹಂತಕ್ಕೆ ಬಂದಿತ್ತು. ಈಗ ಸತೀಶ್ ಜಾರಕಿಹೊಳಿ ಜೊತೆಗಿನ ಕದನದ ಬಿಸಿ ಕೈ ಪಾಳಯಕ್ಕೆ ತಟ್ಟತೊಡಗಿದೆ. ಗೋಕಾಕ್ ನಲ್ಲಿ ಅಶೋಕ್ ಪೂಜಾರಿಯನ್ನ ಕಾಂಗ್ರೆಸ್ ಅಭ್ಯರ್ಥಿ ಮಾಡಿಸಿ ಲಖನ್ ಜಾರಕಿಹೊಳಿಗೆ ಟಿಕೆಟ್ ತಪ್ಪಿಸುವ ಲಕ್ಷ್ಮಿ ಪ್ರಯತ್ನಕ್ಕೆ ಸತೀಶ್ ಜಾರಕಿಹೊಳಿ ಕೆಂಡ ಮಂಡಲರಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ ಬ್ರದರ್ಸ್‌ಗೆ ಮತ್ತೆ ಲಕ್ಷ್ಮಿ ಸವಾಲು?

ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ತಮ್ಮ ಅಸಮಧಾನ ಹೊರ ಹಾಕಿರುವ ಸತೀಶ್, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಾಡಿಗೆ ಅವರಿದ್ದರೆ ಸರಿ ನಮ್ಮ ತಂಟೆಗೆ ಬರದಂತೆ ಹೇಳಿ ಎಂದಿದ್ದಾರೆ.

ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಬೇಕು ಅಂತ ಕಳೆದ 2-3 ತಿಂಗಳಿನಿಂದ ನಾನು ಹಾಗೂ ಲಖನ್ ಓಡಾಡುತ್ತಿದ್ದೇವೆ. ಆದರೆ ಲಕ್ಷ್ಮಿ, ಸುಮ್ಮನೆ ಅಶೋಕ್ ಪೂಜಾರಿಯನ್ನ ಎಳೆದು ತರುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಬೇರೆ ರೀತಿಯೇ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲವನ್ನು ಸರಿ ಪಡಿಸೋಣ ಸಮಾಧಾನದಿಂದಿರಿ ಎಂದು ಸತೀಶ್ ಜಾರಕಿಹೊಳಿಗೆ ಸಮಾಧಾನ ಪಡಿಸಿದ್ದಾರೆ.

ಒಟ್ಟಿನಲ್ಲಿ ರಮೇಶ್ ಜೊತೆ ಗಲಾಟೆ ಮಾಡಿಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸತೀಶ್ ಹಾಗೂ ಲಖನ್ ಜಾರಕಿಹೊಳಿ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಲಕ್ಷ್ಮಿ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಈ ಜಟಾಪಟಿ ಈಗ ಕಾಂಗ್ರೆಸ್ ಪಾಲಿಗೆ ಹೊಸ ತಲೆನೋವು ತಂದಿಟ್ಟಿದೆ.

Click to comment

Leave a Reply

Your email address will not be published. Required fields are marked *