ಬೆಂಗಳೂರು: ಕೆಪಿಸಿಸಿ ಪಟ್ಟಾಭಿಷೇಕದ ಬಗ್ಗೆ ಹೈಕಮಾಂಡ್ ಮಟ್ಟದಿಂದಲೇ ನೇರವಾದ ಮಾಹಿತಿ ಪಡೆಯಲು ದೆಹಲಿಗೆ ಹೋಗಿದ್ದ ಟ್ರಬಲ್ ಶೂಟರ್‍ಗೆ ಸಿಹಿ ಹಾಗೂ ಕಹಿ ಎರಡೂ ಅನುಭವಗಳು ಆಗಿವೆ.
ಈ ತಿಂಗಳ ಅಂತ್ಯದೊಳಗೆ ಕೆಪಿಸಿಸಿ ಅಧ್ಯಕ್ಷರ ಹೆಸರನ್ನ ಅಧಿಕೃತವಾಗಿ ಪ್ರಕಟಿಸುತ್ತೇವೆ. ಕೆಪಿಸಿಸಿ ಪಟ್ಟಾಭಿಷೇಕಕ್ಕೆ ನೀವು ಸಿದ್ಧರಾಗಿ ಅನ್ನೋ ಸ್ಪಷ್ಟ ಸಂದೇಶವನ್ನ ಹೈಕಮಾಂಡ್ ನಾಯಕರು ನೀಡಿದ್ದಾರೆ. ಈ ಸಂತೋಷದ ನಡುವೆಯೇ ಬೇಸರದ ವಿಷಯವೊಂದು ಡಿಕೆಶಿ ಕಿವಿಗೆ ಬಿದ್ದಿದೆ.
ತಮ್ಮನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಜೊತೆ ಜೊತೆಗೆ ಇಬ್ಬರು ಕಾರ್ಯಾಧ್ಯಕ್ಷರ ನೇಮಕಕ್ಕೂ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಈಗಿರುವ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರನ್ನ ಮುಂದುವರಿಸಿ ಅವರ ಜೊತೆಗೆ ಇನ್ನೋರ್ವ ಕಾರ್ಯಾಧ್ಯಕ್ಷರನ್ನು ನೇಮಿಸಲು ಹೈಕಮಾಂಡ್ ನಿರ್ಧರಿಸಿದೆ.
ಈ ಹಿಂದೆ ಸ್ವತಃ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಡಿ.ಕೆ ಶಿವಕುಮಾರ್ ತಾವು ಅಧ್ಯಕ್ಷರಾಗುವುದಾದರೆ ಕಾರ್ಯಾಧ್ಯಕ್ಷರ ನೇಮಕ ಬೇಡ ಎಂದು ಪಟ್ಟು ಹಿಡಿದಿದ್ದರು. ಆದರೆ ತಿಂಗಳ ಅಂತ್ಯದೊಳಗೆ ಕೆಪಿಸಿಸಿ ಪಟ್ಟಾಭಿಷೇಕದ ಖುಷಿಯಲ್ಲಿರುವ ಡಿಕೆಶಿಗೆ ಕಾರ್ಯಾಧ್ಯಕ್ಷರ ನೇಮಕದ ಬೇಸರವೂ ಇದೆ. ಹೀಗೆ ಬಹಳ ನಿರೀಕ್ಷೆಯಲ್ಲಿ ದೆಹಲಿಗೆ ಬಂದಿದ್ದ ಡಿಕೆಶಿಗೆ ಅರ್ಧ ಸಿಹಿ ಅರ್ಧ ಕಹಿಯ ಅನುಭವವಾಗಿದೆ.