ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಮುಂದಾದ ಕಾಂಗ್ರೆಸ್ ನಾಯಕರುಗಳು ಕೊನೆ ಅಸ್ತ್ರವೊಂದನ್ನ ಕೈಗೆತ್ತಿಕೊಂಡಿದ್ದಾರೆ. ಅದೇನಂದರೆ ಡಿಕೆಶಿ ಅಧ್ಯಕ್ಷ ಆದರೆ ಓಕೆ. ಆದರೆ ಅವರು ಅಧ್ಯಕ್ಷರಾದ ಬಳಿಕ ಇಡಿ ಅಥವಾ ಸಿಬಿಐನಿಂದ ಸಮಸ್ಯೆ ಎದುರಾದರೆ ಏನು ಮಾಡೋದು. ಹೀಗಾಗಿ ಸದ್ಯಕ್ಕೆ ಡಿಕೆಶಿಗೆ ಕೆಪಿಸಿಸಿ ಪಟ್ಟ ಬೇಡ ಅನ್ನೋದೇ ಈ ಹೊಸ ಅಸ್ತ್ರವಾಗಿದೆ.
ಕೆಪಿಸಿಸಿ ಪಟ್ಟಕ್ಕೆ ಡಿ.ಕೆ ಶಿವಕುಮಾರ್ ಬರುವುದು ಖಚಿತವಾಗುತ್ತಿದ್ದಂತೆಯೇ ಅದನ್ನು ತಪ್ಪಿಸುವ ಪ್ರಯತ್ನ ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ. ಡಿಕೆಶಿ ಅಧ್ಯಕ್ಷರಾದ ನಂತರ ಮತ್ತೆ ಇಡಿ ಅಥವಾ ಸಿಬಿಐನಿಂದ ಸಮಸ್ಯೆಯಾದರೆ ಪಕ್ಷಕ್ಕೂ ಮುಜುಗರವಾಗಬಹುದು. ಆದ್ದರಿಂದ ಪಟ್ಟಾಭಿಷೇಕಕ್ಕೂ ಮುನ್ನ ಅದರ ಬಗ್ಗೆ ಯೋಚಿಸಿ ಅನ್ನುವ ಹೊಸ ವರಸೆಯನ್ನು ನಾಯಕರು ಹೈಕಮಾಂಡ್ ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಬಣದ ವಿರುದ್ಧವಾಗಿ ಡಿಕೆಶಿ ಬೆಂಬಲಕ್ಕೆ ನಿಂತಿದ್ದ ಮೂಲ ಕಾಂಗ್ರೆಸ್ಸಿಗರು ಕೂಡ ಇದೇ ವಾದವನ್ನ ಮುಂದಿಡುತ್ತಿದ್ದಾರೆ. ಇತ್ತ ಹೈಕಮಾಂಡ್ ಗೆ ಗುಪ್ತ ವರದಿ ರವಾನಿಸಿದ್ದ ಪರಮೇಶ್ವರ್ ಕೂಡ ಡಿಕೆ ಓಕೆ. ಆದರೆ ಇದೊಂದು ಸಮಸ್ಯೆ ಎದುರಾಗುವುದಾದರೆ ರಿಸ್ಕ್ ತೆಗೆದುಕೊಳ್ಳುವುದು ಯಾಕೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಹೀಗೆ ಪಕ್ಷದೊಳಗಿನ ಶತ್ರುಗಳು, ಹಿತ ಶತ್ರುಗಳೆಲ್ಲರೂ ತಮ್ಮ ಪಾಲಿಗೆ ಇಡಿ ಅಥವಾ ಸಿಬಿಐ ಸಂಕಷ್ಟ ಎದುರಾಗಬಹುದು ಎಂಬುದನ್ನೇ ಕಾರಣ ಮಾಡಿಕೊಂಡು ಕೆಪಿಸಿಸಿ ಪಟ್ಟ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಇದೆಲ್ಲ ಮಾಹಿತಿ ತಿಳಿದ ಡಿಕೆಶಿ ರಾಂಗ್ ಆಗಿದ್ದಾರೆ. ಇದನ್ನು ಮೀರಿ ಹೈಕಮಾಂಡ್ ಡಿಕೆಶಿಗೆ ಮಣೆ ಹಾಕುತ್ತಾ? ಅಥವಾ ವಿರೋಧಿಗಳ ಮಾತಿಗೆ ಹೈಕಮಾಂಡ್ ಮಣಿಯುತ್ತಾ ಅನ್ನೋದೇ ಡಿಕೆಶಿಗಿರುವ ಸದ್ಯದ ಆತಂಕ.