ಬೆಂಗಳೂರು: ಈಗಾಗಲೇ ರಾಜೀನಾಮೆ ನೀಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಇತರ ಅತೃಪ್ತ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.
ಇಂದು ಬೆಳಗ್ಗೆ ಸರ್ಕಾರಿ ಬಂಗಲೆಗೆ ಸಿಎಲ್‍ಪಿ ಸಿಬ್ಬಂದಿ ಭೇಟಿ ನೀಡಿ ಕಂಪೌಂಡಿನಲ್ಲಿ ವಿಪ್ ಅಂಟಿಸಿದ್ದಾರೆ. ಆದರೆ ರಮೇಶ್ ಜಾರಕಿಹೊಳಿಯವರು ಅತೃಪ್ತರ ಜೊತೆ ಮುಂಬೈ ಹೋಟೆಲ್ ನಲ್ಲಿ ತಂಗಿದ್ದಾರೆ.
ಇಂದಿನ ಅಧಿವೇಶನದಲ್ಲಿ ಅತೃಪ್ತ ಶಾಸಕರು ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಗುರುವಾರದಿಂದ ಕಾಂಗ್ರೆಸ್ ನವರು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸದನಕ್ಕೆ ಹಾಜರಾಗುವಂತೆ ಮಾಹಿತಿ ನೀಡಿದ್ದರು. ಇಂದು ಸಿಎಲ್‍ಪಿ ಸಿಬ್ಬಂದಿ ಅತೃಪ್ತರ ನಿವಾಸ ಹಾಗೂ ಕೊಠಡಿಗಳಿಗೆ ಪ್ರತಿ ಅಂಟಿಸಿದ್ದಾರೆ. ಈ ಮೂಲಕ ಇದನ್ನು ನೋಡಿಯಾದರೂ ಸದನಕ್ಕೆ ಹಾಜರಾಗಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
ಜುಲೈ 6 ಶನಿವಾರದಂದು ಅತೃಪ್ತರು ರಾಜೀನಾಮೆ ಸಲ್ಲಿಸಿದ್ದರು. ಆದರೆ ಭಾನುವಾರ ರಜೆ, ಸೋಮವಾರ ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸ್ಪೀಕರ್ ರಜೆಯಲ್ಲಿದ್ದರು. ಮಂಗಳವಾರ ರಾಜೀನಾಮೆ ಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಸಿ ಸರಿಯಾಗಿ ರಾಜೀನಾಮೆ ಸಲ್ಲಿಸಲಿಲ್ಲ. ಮತ್ತೆ ಬಂದು ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು.
ಇತ್ತ ತಾವು ನೀಡಿದ್ದ ರಾಜೀನಾಮೆ ಅಂಗೀಕಾರ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸುಪ್ರೀಂ ಮೊರೆಹೋಗಿದ್ದರು. ಗುರುವಾರ ವಿಚಾರಣೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುಪ್ರೀಂ ನಿರ್ದೇಶನದಂತೆ 10 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಅತೃಪ್ತ ಶಾಸಕರ ಕೇಸ್ ಹೊಸ ತೀರ್ಪಿಗೆ ನಾಂದಿಯಾಗುತ್ತಾ ಎಂಬುದನ್ನು ಕಾದು ನೋಡಬೇಕು.