ಬೆಂಗಳೂರು: ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸಲು ಸತತ ಪ್ರಯತ್ನ ಮಾಡಿದ್ದರೂ ಫಲಪ್ರದವಾಗಲಿಲ್ಲ. ಕಾಂಗ್ರೆಸ್ ನಾಯಕರಿಗೆ ಭರವಸೆ ನೀಡಿದ ಬೆನ್ನಲ್ಲೇ ಎಂಟಿಬಿ ಅವರು ಮುಂಬೈಗೆ ತೆರಳಿ ಅತೃಪ್ತರ ಬಳಗವನ್ನು ಸೇರಿಕೊಂಡಿದ್ದಾರೆ.
ಶನಿವಾರ ರಾತ್ರಿ ಎಂಟಿಬಿ ಸಂಧಾನಕ್ಕೆ ಮಣಿದು ರಾಜೀನಾಮೆ ಪಡೆಯುತ್ತಾರೆ ಎಂದು ದೋಸ್ತಿ ನಾಯಕರು ತೀರ್ಮಾನಿಸಿದ್ದರು. ಆದರೆ ಕಾಂಗ್ರೆಸ್ ನಾಯಕರಿಗೆ ಕೈ ಕೊಟ್ಟ ಎಂಟಿಬಿ ಇಂದು ದಿಢೀರ್ ಮುಂಬೈಗೆ ಹಾರಿದ್ದಾರೆ. ಹೀಗಾಗಿ ಒಬ್ಬೊಬ್ಬರನ್ನೇ ಮನವೊಲಿಕೆ ಮಾಡಿಕೊಳ್ಳುವ ದೋಸ್ತಿ ನಾಯಕರ ಆಟ ಬಹುತೇಕ ಇಲ್ಲಿಗೆ ಮುಗಿದಂತೆ ಕಾಣುತ್ತಿದೆ. ಎಂಟಿಬಿ ಮನವೊಲಿಕೆ ಆಯ್ತು, ಎಂಟಿಬಿ ಮೂಲಕ ಸುಧಾಕರ್ ಕರೆತರಬಹುದು ಅನ್ನೋದು ದೋಸ್ತಿ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ ಎಂಟಿಬಿ ಅವರು ವಿಮಾನ ಹತ್ತುತ್ತಿದ್ದಂತೆಯೇ ದೋಸ್ತಿ ನಾಯಕರ ಸರ್ಕಾರ ಉಳಿವಿನ ಕನಸು ಕರಗತೊಡಗಿದೆ.
ನಿರೀಕ್ಷೆ ಇಟ್ಟಿದ್ದ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಸಹ ಕೈ ಕೊಟ್ಟ ಹಿನ್ನೆಲೆಯಲ್ಲಿ ಇನ್ನುಳಿದ ಶಾಸಕರ ಮನವೊಲಿಕೆ ಯತ್ನವನ್ನು ಕೈಬಿಡುವುದೇ ಸೂಕ್ತ ಎನ್ನುವ ಮಾತು ದೋಸ್ತಿ ವಲಯದಲ್ಲಿ ಆರಂಭವಾಗಿದೆ. ಕೈಗೆ ಸಿಕ್ಕ ಶಾಸಕರೇ ಹೀಗೆ, ಇನ್ನು ಕೈ ಕೊಟ್ಟು ಹೋದ ಮೇಲೆ ಕೈಗೆ ಸಿಗದವರು ವಾಪಸ್ ಬರುತ್ತಾರೆ ಎಂದು ಕಾಯೋದರಲ್ಲಿ ಅರ್ಥವೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಹುತೇಕ ಶಾಸಕರ ಮನವೊಲಿಕೆಯ ಯತ್ನ ಕೈ ಬಿಡುವ ಸಾಧ್ಯತೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಎಂ ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿದಂತೆ ಕೈ ನಾಯಕರು ಇನ್ನು ಮನವೊಲಿಕೆ ಯತ್ನ ಮಾಡೋದು ಡೌಟು. ಅಲ್ಲಿಗೆ ಕೈ ಪಾಳಯದಲ್ಲಿ ಸರ್ಕಾರ ಉಳಿಸಿಕೊಳ್ಳುವ ಯತ್ನ ಬಹುತೇಕ ಕೈ ಬಿಟ್ಟಂತೆ ಕಾಣುತ್ತಿದೆ.