ಅಧಿಕಾರ ಹೋಗುತ್ತಿದ್ದಂತೆಯೇ ದೋಸ್ತಿ ಖತಂ

Public TV
2 Min Read
congress jds

ಬೆಂಗಳೂರು: ಅಧಿಕಾರ ಇದ್ದಾಗ ನಾವೆಲ್ಲ ಒಂದೇ, ರಾಜ್ಯದ ಅಭಿವೃದ್ಧಿ ಮಾಡುವ ಜೋಡೆತ್ತು ಎಂದಿದ್ದ ದೋಸ್ತಿ ನಾಯಕರು ಅಧಿಕಾರ ಹೋದ ಮೇಲೆ ಹೊಸ ವರಸೆ ತೆಗೆದಿದ್ದಾರೆ. ಮೈತ್ರಿ ಮುರಿಯಲು ಹೊಸ ರಾಗ-ತಾಳ ಹಾಕುತ್ತಿರುವ ಎರಡು ಪಕ್ಷದ ನಾಯಕರೂ ಸ್ಕ್ರೀನ್ ಪ್ಲೇ ಪ್ರಾರಂಭ ಮಾಡಿದ್ದಾರೆ. ಮೈತ್ರಿ ಆಟಕ್ಕೆ ಬ್ರೇಕ್ ಹಾಕೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಶತಾಯಗತಾಯ ದೋಸ್ತಿ ಕಟ್ ಮಾಡಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿರುವ ಎರಡೂ ಪಕ್ಷದ ನಾಯಕರು ಸಿಕ್ಕ-ಸಿಕ್ಕ ಕಡೆ ದೋಸ್ತಿ ಬೇಡ ಎನ್ನುವ ಡೈಲಾಗ್‍ಗಳನ್ನು ಹೊಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್‍ನ ಮಾಜಿ ಸಚಿವ ಜಿ.ಟಿ ದೇವೇಗೌಡ ಬಿಜೆಪಿಗೆ ಬಾಹ್ಯ ಬೆಂಬಲ ಕೊಡೋಣ ಎಂದು ಶಾಸಕರು ಹೇಳಿದ್ದಾರೆ ಎಂದು ಹೇಳಿದ್ದರೋ, ಅಂದಿನಿಂದ ದೋಸ್ತಿ ಫ್ರೆಂಡ್ ಶಿಫ್ ಮುಗಿಯೋಕೆ ಪ್ರಾರಂಭವಾಯಿತು. ಈಗ ಇದೇ ದಾಟಿಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡ ಕೂಡ ಮಾತನಾಡಿದ್ದು, ದೋಸ್ತಿ ಸಹವಾಸಕ್ಕೆ ಕೊನೆ ಮೊಳೆ ಹೊಡೆಯುವ ಹೇಳಿಕೆ ಕೊಟ್ಟಿದ್ದಾರೆ.

ಭಾನುವಾರ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಗೌಡರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತಾಡಿ ದೋಸ್ತಿ ಅಳಿವು-ಉಳಿವು ಮಾತನಾಡುತ್ತೇನೆ ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರು ಉಪ ಚುನಾವಣೆಗೆ ಏಕಾಂಗಿ ಸ್ಪರ್ಧೆ ಎಂದು ಘೋಷಣೆ ಮಾಡಿದ್ದಾರೆ.

HD DEVEGOWDA

ಜೆಡಿಎಸ್ ವರಿಷ್ಠರು ಹೀಗೆ ಹೇಳುತ್ತಿದ್ದರೆ, ಕಾಂಗ್ರೆಸ್ ವಲಯದಲ್ಲೂ ದೋಸ್ತಿ ಬೇಡ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮಾಜಿ ಶಾಸಕರ ರಾಜಣ್ಣ ಶನಿವಾರ ದೋಸ್ತಿ ಸಹವಾಸ ಮಾಡಿದರೆ ಕಾಂಗ್ರೆಸ್ ಮುಳುಗುತ್ತೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಸಚಿವ ಶಿವಾನಂದ ಪಾಟೀಲ್ ಕೂಡ ದೋಸ್ತಿ ಮೇಲೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಭಾನುವಾರ ಮಾತನಾಡಿದ ಅವರು, ರೇವಣ್ಣನಿಂದಾನೇ ಮೈತ್ರಿಗೆ ಈ ಕಷ್ಟ. ನನ್ನ ಇಲಾಖೆ ಸೇರಿದಂತೆ ಎಲ್ಲರ ಇಲಾಖೆಯಲ್ಲಿ ರೇವಣ್ಣ ಕೈಹಾಕಿದರು. ಕೆಎಂಎಫ್‍ನಲ್ಲೂ ರೇವಣ್ಣ ದರ್ಬಾರ್ ಜೋರಾಗಿತ್ತು ಎಂದು ಆರೋಪ ಮಾಡುವ ಮೂಲಕ ದೋಸ್ತಿ ಸರ್ಕಾರ ಪತನಕ್ಕೆ ರೇವಣ್ಣ ಕಾರಣ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಜೊತೆ ಹೋದ್ರೆ ಲಾಭ ಏನು? ಅನ್ನೋ ಲೆಕ್ಕದಲ್ಲಿ ದೊಡ್ಡಗೌಡ್ರು ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಜಿಟಿಡಿ ಬಿಜೆಪಿಗೆ ಬಾಹ್ಯ ಬೆಂಬಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವರು ಜೆಡಿಎಸ್ ಸಹವಾಸ ಬೇಡ ಎನ್ನುತ್ತಿದ್ದಾರೆ. ಇದೆಲ್ಲವನ್ನ ನೋಡುತ್ತಿದ್ದರೆ ದೋಸ್ತಿ ಮುಗಿಯುವ ಲಕ್ಷಣಗಳು ಕಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *