ಬೆಂಗಳೂರು: ದೋಸ್ತಿಗಳು ಸೋಮವಾರ ವಿಶ್ವಾಸಮತ ಯಾಚಿಸೋದಾಗಿ ಹೇಳಿದ್ದಾರೆ. ಆದರೆ ತಾವು 3 ಬಾರಿ ಕೊಟ್ಟ ಡೆಡ್‍ಲೈನನ್ನು ಮೀರಿದ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಈ ಮೂಲಕ ತಮ್ಮ ಸೂಚನೆ, ಆದೇಶವನ್ನು ಮೀರಿದ ದೋಸ್ತಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವರದಿಯಲ್ಲಿ ಏನಿದೆ..?
ಶಾಸಕರ ರಾಜೀನಾಮೆಯಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಶಾಸಕರ ರಾಜೀನಾಮೆಯಿಂದಾಗಿ ಆಡಳಿತ ವ್ಯವಸ್ಥೆ ಹಳಿತಪ್ಪಿದೆ. ರಾಜೀನಾಮೆ ಕೊಟ್ಟ ಶಾಸಕರು ದೋಸ್ತಿಗಳ ಒತ್ತಡದಿಂದ ಮುಂಬೈ ಸೇರಿದ್ದಾರೆ. ತಮಗಿರುವ ಆತಂಕಗಳ ಬಗ್ಗೆ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆಡಳಿತ ಪಕ್ಷದ ಶಾಸಕರು ಕ್ಷೇತ್ರ ಬಿಟ್ಟು ರೆಸಾರ್ಟ್ ಸೇರಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವಿಪಕ್ಷ ಬಿಜೆಪಿ ಶಾಸಕರು ಕುದುರೆ ವ್ಯಾಪಾರದ ಭಯದಿಂದಾಗಿ ರೆಸಾರ್ಟ್ ಸೇರಿದ್ದಾರೆ.
ಸರ್ಕಾರ ಅಲ್ಪಮತತಕ್ಕೆ ಕುಸಿದಿದ್ದು ದೂರು ನನ್ನಲ್ಲಿವರೆಗೂ ತಲುಪಿದೆ. ಆದರೆ ಮುಖ್ಯಮಂತ್ರಿಗಳು ವಿಶ್ವಾಸ ಮತ ಸಾಬೀತು ಮಾಡದೆ ಸತಾಯಿಸುತ್ತಿದ್ದಾರೆ. ಸ್ವತಃ ನಾನೇ ಮಧ್ಯ ಪ್ರವೇಶ ಮಾಡಿ ಸೂಚನೆ ನೀಡಿದರೂ ಮುಖ್ಯಮಂತ್ರಿಗಳು ವಿಶ್ವಾಸಮತ ಸಾಬೀತು ಮಾಡಿಲ್ಲ. ಇನ್ನೊಂದೆಡೆ ಸ್ಪೀಕರ್ ಅವರು ಕೂಡ ಸುಪ್ರೀಂಕೋರ್ಟ್ ಸೂಚನೆ ಹೊರತಾಗಿಯೂ ಕಾಲಾಹರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ರಾಜಭವನದ ವಿಶೇಷ ಅಧಿಕಾರಿಯವರೇ ಎರಡು ದಿನಗಳ ಕಾಲ ಸದನದ ಚರ್ಚೆಯಲ್ಲಿ ಭಾಗವಹಿಸಿ ಎಲ್ಲ ಬೆಳವಣಿಗೆಗೆ ಸಾಕ್ಷಿ ಆಗಿದ್ದಾರೆ. ಇನ್ನೊಂದೆಡೆ ಸ್ಪೀಕರ್ ಮೂಲಕ ರಾಜೀನಾಮೆ ನೀಡಿದ ಶಾಸಕರ ಅನರ್ಹತೆಗೆ ಆಡಳಿತ ರೂಢ ದೋಸ್ತಿ ಪಕ್ಷಗಳು ಯತ್ನಿಸುತ್ತಿವೆ. ಹೀಗೆ ಸಾಲು ಸಾಲು ಆರೋಪಗಳ ದೂರನ್ನ ರಾಜ್ಯಪಾಲರು ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ.