– ಕಾಂಗ್ರೆಸ್ ಪ್ರತಿವಾದವೇನಿತ್ತು?
ಬೆಂಗಳೂರು: ಇಂದು ತೀರ್ಪು ಪ್ರಕಟ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು, ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಇವರೆಲ್ಲರಿಗೂ ಡಿಸಿಎಂ ಅಶ್ವಥ್ ನಾರಾಯಣ ಸಾಥ್ ನೀಡಿದ್ದಾರೆ.
ದೋಸ್ತಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹರಾಗಿರೋ ಶಾಸಕರು ಸುಪ್ರೀಂಕೋರ್ಟಿನಲ್ಲಿ ಮಂಡಿಸಿದ್ದ ವಾದ ಹಾಗೂ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮಾಡಿದ ಪ್ರತಿವಾದದ ಬಗ್ಗೆ ತಿಳಿದುಕೊಳ್ಳೋಣ.
Advertisement
Advertisement
ಗೋಕಾಕ್‍ನ ರಮೇಶ್ ಜಾರಕಿಹೊಳಿ ಮತ್ತವರ ಆತ್ಯಾಪ್ತ ಅಥಣಿಯ ಮಹೇಶ್ ಕುಮಟಳ್ಳಿಯವರು ಬಿಜೆಪಿ ಸಂಸದ ಉಮೇಶ್ ಜಾಧವ್ ಮಾದರಿಯಲ್ಲೇ ನಮ್ಮ ರಾಜೀನಾಮೆ ಒಪ್ಪಿಕೊಳ್ಳಬೇಕಿತ್ತು. ಜಾಧವ್ ರಾಜೀನಾಮೆ ಒಪ್ಪಿಕೊಂಡು, ನಮ್ಮನ್ನು ಅನರ್ಹಗೊಳಿಸಿದ್ದು ಸರಿಯಲ್ಲ. ರಾಜೀನಾಮೆ ಸಲ್ಲಿಸಿದ್ದರೂ ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹತೆ ಸರಿಯಲ್ಲ ಎಂದು ವಾದಿಸಿದ್ದರು.
Advertisement
ಮೈತ್ರಿ ಸರ್ಕಾರ ಪತನಗೊಳಿಸಲು ಜಾರಕಿಹೊಳಿ ಪಿತೂರಿ ಮಾಡಿದ್ದಾರೆ. ಬಿಜೆಪಿ ಪರ ಪ್ರಚಾರ ನಡೆಸಿ, ಪಕ್ಷದ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಉಮೇಶ್ ಜಾಧವ್‍ಗೆ ಅನ್ವಯಿಸಿದ ನಿಯಮ ಜಾರಕಿಹೊಳಿಗೆ ಅನ್ವಯಿಸದು ಎಂದು ರಮೇಶ್, ಮಹೇಶ್ ವಾದಕ್ಕೆ ಕಾಂಗ್ರೆಸ್ ಪ್ರತಿವಾದ ಮಾಡಿತ್ತು. ಇದನ್ನೂ ಓದಿ: ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?
Advertisement
ಶ್ರೀಮಂತಪಾಟೀಲ್ ವಾದ?
ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆಯನ್ನೇ ಕೊಟ್ಟಿಲ್ಲ. ಹೃದಯ ಸಂಬಂಧಿ ತೊಂದರೆಗೆ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಮುಂಬೈನಿಂದಲೇ ಸ್ಪೀಕರ್ ಗೆ ಕೂಡ ಪತ್ರ ಬರೆದಿದ್ದೇನೆ. ನನ್ನ ವಾದ ಆಲಿಸದೆ ಅನರ್ಹಗೊಳಿಸಿರುವುದು ಅಕ್ಷಮ್ಯ ಅಪರಾಧ. ಅನಾರೋಗ್ಯದ ಕಾರಣ ಕೊಟ್ಟು ಕೂಡ್ಲಿಗಿ ಶಾಸಕ ನಾಗೇಂದ್ರ ಹಾಜರಾಗಿರಲಿಲ್ಲ. ನಾಗೇಂದ್ರಗೆ ವಿನಾಯ್ತಿ ಕೊಟ್ಟು ನನ್ನನ್ನು ಅನರ್ಹಗೊಳಿಸುತ್ತಿರೋದ್ಯಾಕೆ ಎಂದು ವಾದದ ವೇಳೆ ಪ್ರಶ್ನಿಸಿದ್ದರು.
ಕಾಂಗ್ರೆಸ್ ಪ್ರತಿವಾದ?
ಅನಾರೋಗ್ಯ ಪೀಡಿತ ನಾಗೇಂದ್ರಗೆ ಮೊದಲೇ ಅನುಮತಿ ಕೊಡಲಾಗಿತ್ತು. ಶ್ರೀಮಂತ ಪಾಟೀಲ್ ಭೇಟಿಗೆ ಮುಂಬೈನಲ್ಲಿ ಅವಕಾಶ ಕೊಡಲಿಲ್ಲ. ಮುಂಬೈಗೆ ಪೊಲೀಸರು ತೆರಳಿದ್ದರೂ ಭೇಟಿಗೆ ಅವಕಾಶ ಸಿಗಲಿಲ್ಲ. ಉದ್ದೇಶಪೂರ್ವಕವಾಗಿಯೇ ಕಲಾಪಕ್ಕೆ ಗೈರಾಗಿದ್ದಾರೆ. ವಿಪ್ ಉಲ್ಲಂಘನೆ ಆಧಾರದಲ್ಲಿ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪ್ರತಿವಾದಿಸಿತ್ತು.
ಆನಂದ್ ಸಿಂಗ್ ವಾದ?
ಜಿಂದಾಲ್‍ಗೆ ಭೂಮಿ ಪರಭಾರೆ ವಿವಾದ ಸಂಬಂಧ ರಾಜೀನಾಮೆ ಕೊಟ್ಟಿದ್ದೇನೆ. ಎಲ್ಲರಿಗಿಂತ ಮುಂಚೆಯೇ ನಾನು ರಾಜೀನಾಮೆ ನೀಡಿದ್ದೇನೆ. ಮುಂಬೈ ರೆಸಾರ್ಟಿನಲ್ಲಿ ವಾಸ್ತವ್ಯ ಮಾಡಿಲ್ಲ. ಅನರ್ಹರ ಗುಂಪಿನಲ್ಲೂ ನಾನು ಕಾಣಿಸಿಕೊಂಡಿರಲಿಲ್ಲ ಎಂದು ವಿಜಯನಗರ ಅಥವಾ ಹೊಸಪೇಟೆಯ ಆನಂದ್ ಸಿಂಗ್ ವಾದ ಮಾಡಿದ್ದರು.
ಕಾಂಗ್ರೆಸ್ ಪ್ರತಿವಾದ?
ಅತೃಪ್ತರ ಬಣದೊಂದಿಗೆ ಆನಂದ್‍ಸಿಂಗ್‍ಗೆ ಒಡನಾಟವಿತ್ತು. ಸರ್ಕಾರ ಬೀಳಿಸುವ ಉದ್ದೇಶ ಹೊಂದಿದ್ದರು ಎಂದು ಆನಂದ್ ಸಿಂಗ್ ವಾದಕ್ಕೆ ಕಾಂಗ್ರೆಸ್ ಪ್ರತಿವಾದ ಮಾಡಿತ್ತು.
ಸುಧಾಕರ್ ವಾದ?
ನಾನು ಪಕ್ಷ ಬಿಟ್ಟಿಲ್ಲ. ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನ ಬೇಡ. ಸಿಎಂ ಎಚ್‍ಡಿಕೆ ಕಾರ್ಯವೈಖರಿ ಬೇಸರದಿಂದ ರಾಜೀನಾಮೆ ನಿಡಿದ್ದೇನೆ. ನನಗೆ ಶಾಸಕತ್ವ ಬೇಕಾಗಿರಲಿಲ್ಲ. ಶಾಸಕನಾಗಿ ಬೇರೆ ಪಕ್ಷಕ್ಕೆ ಸೇರಿದರೆ ತಪ್ಪು. ನಾನು ಬೇರೆ ಪಕ್ಷ ಸೇರಿಲ್ಲ. ಸುಪ್ರೀಂ ರಕ್ಷಣೆ ಇದ್ದ ಕಾರಣಕ್ಕೆ ವಿಪ್ ಅನ್ವಯವಾಗುವುದಿಲ್ಲ. ನೋಟಿಸ್ ಉತ್ತರಕ್ಕೆ 7 ದಿನ ಬದಲು 3 ದಿನ ಟೈಂ ಕೊಟ್ಟಿದ್ದು ಸರಿಯಲ್ಲ. ಮುಂಬೈ ಪ್ರವಾಸಕ್ಕೂ, ರಾಜೀನಾಮೆಗೂ ಸಂಬಂಧವೇ ಇಲ್ಲ ಎಂದು ಸುಧಾಕರ್ ತಿಳಿಸಿದ್ದರು.
ಕಾಂಗ್ರೆಸ್ ಪ್ರತಿವಾದ?
ದುರುದ್ದೇಶಪೂರ್ವಕವಾಗಿಯೇ ಕಲಾಪಕ್ಕೆ ಗೈರಾಗಲಾಗಿದೆ. ಕಲಾಪಕ್ಕೆ ಗೈರು ಪರಿಗಣಿಸಿಯೇ ಅನರ್ಹಗೊಳಿಸಲಾಗಿದೆ. ಸಾಂದರ್ಭಿಕ ಬೆಳವಣಿಗೆಯನ್ನು ಪರಿಗಣಿಸಿ ಅನರ್ಹತೆಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು.
ಸೋಮಶೇಖರ್, ಬಿ.ಸಿ.ಪಾಟೀಲ್, ಮುನಿರತ್ನ, ಎಚ್.ವಿಶ್ವನಾಥ್, ಶಿವರಾಂ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಕೆ.ಗೋಪಾಲಯ್ಯ , ನಾರಾಯಣ ಗೌಡ, ಎಂ.ಟಿ.ಬಿ. ನಾಗರಾಜ್, ರೋಷನ್ ಬೇಗ್, ಬೈರತಿ ಬಸವರಾಜ್ ವಾದವೇನು?
ರಾಜೀನಾಮೆ ನೀಡುವುದು ನಮ್ಮ ಹಕ್ಕು. ಯಾರ ಪ್ರಚೋದನೆಗೆ ಒಳಗಾಗಿ ರಾಜೀನಾಮೆ ಕೊಟ್ಟಿಲ್ಲ. ನೋಟಿಸ್‍ಗೆ ಉತ್ತರಿಸಲು 7 ದಿನ ಬದಲು 3 ದಿನ ಕೊಡಲಾಗಿದೆ. ನಮ್ಮ ಹಕ್ಕುಗಳನ್ನು ಸ್ಪೀಕರ್ ಮೊಟಕುಗೊಳಿಸಿದ್ದಾರೆ. ಸರ್ಕಾರದ ಆದೇಶದಂತೆ ನಮ್ಮನ್ನು ಅನರ್ಹಗೊಳಿಸಲಾಗಿದೆ. ಅನರ್ಹತೆ ವೇಳೆ ಕಾನೂನು ನಿಯಮಾವಳಿ ಅನುಸರಿಸಿಲ್ಲ ಎಂದು ವಾದಿಸಿದ್ದರು.
ಕಾಂಗ್ರೆಸ್ ಪ್ರತಿವಾದ?
ಹೊಸ ಸರ್ಕಾರದಲ್ಲಿ ಸಚಿವನಾಗಬೇಕೆಂಬ ಉದ್ದೇಶವೇ ರಾಜೀನಾಮೆಗೆ ಕಾರಣ. ಮೈತ್ರಿ ಸರ್ಕಾರ ಬೀಳಿಸಲು ಪಿತೂರಿ ನಡೆಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿತ್ತು.
ಶಂಕರ್ ವಾದವೇನು?
ಏಕವ್ಯಕ್ತಿಯ ಪಕ್ಷ ಕಾಂಗ್ರೆಸ್ ಜತೆ ಅಧಿಕೃತವಾಗಿ ವಿಲೀನಗೊಂಡಿಲ್ಲ. ಕೆಪಿಜೆಪಿ ವಿಲೀನ ಬಗ್ಗೆ ಸ್ಪೀಕರೂ ಅಧಿಕೃತ ಆದೇಶ ಹೊರಡಿಸಿಲ್ಲ. ವಿಲೀನ ಬಗ್ಗೆ ಸ್ಪೀಕರ್ ಪತ್ರ ಕೇಳಿದ್ದರು, ನಾನು ಕೊಟ್ಟಿರಲಿಲ್ಲ. ವಿಲೀನ ಆಗದಿರುವುದರಿಂದ ವಿಪ್ ನನಗೆ ಅನ್ವಯ ಆಗಲ್ಲ.
ಕಾಂಗ್ರೆಸ್ ಪ್ರತಿವಾದವೇನು?
ಕಾಂಗ್ರೆಸ್ ಸದಸ್ಯತ್ವ ಒಪ್ಪಿಕೊಂಡ ಮೇಲೆಯೇ ಶಂಕರ್ ಮಂತ್ರಿ ಮಾಡಿದ್ದೇವೆ. ಕಾಂಗ್ರೆಸ್ ಬಾವುಟ ಹಿಡಿದಿರುವ ಚಿತ್ರಗಳು ಮಾಧ್ಯಮದಲ್ಲಿ ಪ್ರಕಟವಾಗಿವೆ. ಇವೆಲ್ಲವೂ ಅವರು ಪಕ್ಷ ಸೇರಿದ್ದಾರೆಂಬುದನ್ನೇ ಸೂಚಿಸುತ್ತವೆ ಎಂದು ಕಾಂಗ್ರೆಸ್ ಪ್ರತಿವಾದಿಸಿದೆ.
ಒಟ್ಟಿನಲ್ಲಿ ಇಂದು ಸುಪ್ರೀಂ ಕೋರ್ಟಿನಿಂದ ಎಲ್ಲಾ 17 ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಹೊರಬೀಳುತ್ತಿದ್ದು, ರೆಬೆಲ್ಸ್ ಗೆ ಮಾತ್ರವಲ್ಲದೇ ಬಿಜೆಪಿಯವರ ಎದೆಯಲ್ಲೂ ಢವ ಢವ ಶುರುವಾಗಿದೆ.