ಬೆಂಗಳೂರು: ದೋಸ್ತಿಗಳ ಮುಸುಕಿನ ಗುದ್ದಾಟಕ್ಕೆ ತೇಪೆ ಹಾಕಲು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಮಾಡಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಈ ಮೂಲಕ ಲೋಕಸಭಾ ಚುನಾವಣೆಯವರೆಗೆ ಮೈತ್ರಿ ಸಹಿಸಿಕೊಳ್ಳಿ ಎಂದಿದ್ದ ಕಾಂಗ್ರೆಸ್ ಹೈಕಮಾಂಡ್ ಇನ್ನು ಒಂದಷ್ಟು ದಿನ ಜೆಡಿಎಸ್ ದೋಸ್ತಿ ಸಹಿಸಿಕೊಳ್ಳಿ ಎನ್ನುವ ಕಿವಿ ಮಾತು ಹೇಳೋಕೆ ಮುಂದಾಯ್ತಾ ಎಂಬ ಅನುಮಾನವೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ. ಯಾಕಂದರೆ ಜೆಡಿಎಸ್ ನಾಯಕರ ಮಧ್ಯಂತರ ಚುನಾವಣೆಯ ಮಾತಿನ ಮಧ್ಯೆಯೂ ಕಾಂಗ್ರೆಸ್ ಜೆಡಿಎಸ್ ಸ್ನೇಹಕ್ಕೆ ಜೋತು ಬೀಳುತ್ತಿದೆ. ದೋಸ್ತಿ ನಾಯಕರ ಸಣ್ಣಪುಟ್ಟ ಅಸಮಧಾನಕ್ಕೂ ಕಾಂಗ್ರೆಸ್ ಹೈಕಮಾಂಡ್ ತೇಪೆ ಹಚ್ಚಲು ಮುಂದಾಗಿದೆ.
ನಾಳೆಯಿಂದ ಎರಡು ದಿನಗಳ ಕಾಲ ಕೈ ನಾಯಕರಿಂದ ತೆನೆ ನಾಯಕರ ಮನವೊಲಿಕೆ ಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಬೀಡು ಬಿಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ಅಸಮಧಾನ ಶಮನಗೊಳಿಸಲು ಪ್ರಯತ್ನಿಸಲಿದ್ದಾರೆ. ಹೈ ಕಮಾಂಡ್ ಸೂಚನೆ ಮೇರೆಗೆ ರಾಜ್ಯಕ್ಕೆ ಬರುತ್ತಿರುವ ವೇಣುಗೋಪಾಲ್ ಅಸಮಾಧಾನಿತ ಶಾಸಕರನ್ನ ಕರೆದು ಮಾತನಾಡಲಿದ್ದಾರೆ. ಆನಂತರ ಲೋಕಸಭೆಯ ಪರಜಿತ ಎಲ್ಲಾ 21 ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನ ಹಿರಿಯ ನಾಯಕರ ಜೊತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಹೊಂದಾಣಿಕೆ ನಡೆ ಬಗ್ಗೆ ಸಭೆ ನಡೆಸಲಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಧ್ಯಂತರ ಚುನಾವಣಾ ಪ್ರಸ್ತಾಪ ಹಾಗೂ ಇತರೆ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಲಿದ್ದಾರೆ. ಒಟ್ಟಾರೆ ಲೋಕ ಸಮರದಲ್ಲಿ ಸೋತ ಕಾಂಗ್ರೆಸ್ ಗೆ ದೋಸ್ತಿಗಳೊಂದಿಗಿನ ವಿಶ್ವಾಸ ಗಟ್ಟಿಗೊಳಿಸುವ ಅನಿವಾರ್ಯತೆ ಇದ್ದು, ರಾಜ್ಯ ಸಮ್ಮಿಶ್ರ ಸರ್ಕಾರದ ತಾಳಮೇಳ ಜೋಡಿಸಲು ಕಾಂಗ್ರೆಸ್ ಹೈಕಮಾಂಡ್ ಇನ್ನೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾಗಿರುವುದೇ ಕುತೂಹಲಕಾರಿ ಸಂಗತಿಯಾಗಿದೆ.