ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನ ಮೂಲ ಹಾಗೂ ವಲಸಿಗರ ನಡುವಿನ ಗಲಾಟೆಯಲ್ಲಿ ಕೊನೆಗೂ ಸಿದ್ದರಾಮಯ್ಯ ಗೆದ್ದು ಬೀಗಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ನಾಯಕರ ಲಾಬಿಯ ಹೊರತಾಗಿಯೂ ತಮ್ಮ ಸ್ಥಾನ ಮಾನ ಭದ್ರಪಡಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಬಹುತೇಕ ಯಶಸ್ವಿಯಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಹಠ ಹಿಡಿದು ಕುಳಿತಿದ್ದ ಸಿದ್ದರಾಮಯ್ಯಗೆ ಷರತ್ತುಬದ್ಧವಾಗಿ ಮಣೆ ಹಾಕಲು ಹೈಕಮಾಂಡ್ ನಿರ್ಧರಿಸಿದೆ.
ವಿಪಕ್ಷ ಹಾಗೂ ಸಿಎಲ್‍ಪಿ ಎರಡೂ ಸ್ಥಾನಗಳಿಗೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರು. ಆದರೆ ಆ ಎರಡೂ ಸ್ಥಾನಗಳಿಗೆ ಸಿದ್ದರಾಮಯ್ಯರನ್ನೇ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ವಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯಗೆ ಕೊಟ್ಟರೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬೇರೆಯವರಿಗೆ ಕೊಡಿ ಎಂದು ಮೂಲ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದರು. ಕೊನೆ ಗಳಿಗೆವರೆಗೆ ಮಾಜಿ ಡಿಸಿಎಂ ಪರಮೇಶ್ವರ್ ಸಿಎಲ್‍ಪಿ ಸ್ಥಾನಕ್ಕಾಗಿ ಸಿದ್ದರಾಮಯ್ಯಗೆ ಇನ್ನಿಲ್ಲದ ಪೈಪೋಟಿ ನೀಡಿದ್ದರು.
Advertisement
Advertisement
ಆದರೂ ಅದೆಲ್ಲವನ್ನು ಮೀರಿ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ನಾಯಕನ ಸ್ಥಾನ ಪಡೆಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೆ ಹೈಕಮಾಂಡ್ ಒಂದು ಕಂಡೀಶನ್ ಮೇಲೆ ಸಿದ್ದರಾಮಯ್ಯಗೆ ಸ್ಥಾನಮಾನ ನೀಡಲು ಮುಂದಾಗಿದೆ.
Advertisement
ಅಧಿವೇಶನ ಇರುವ ಹಿನ್ನೆಲೆಯಲ್ಲಿ ಸಿಎಲ್‍ಪಿ ಹಾಗೂ ವಿಪಕ್ಷ ಎರಡೂ ಸ್ಥಾನದಲ್ಲಿ ನೀವೇ ಮುಂದುವರಿಯಿರಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಆದರೆ ಅಧಿವೇಶನ ಮುಗಿದ ನಂತರ ಅಗತ್ಯವೆನ್ನಿಸಿದರೆ ಸಿಎಲ್‍ಪಿ ಸ್ಥಾನದಲ್ಲಿ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂಬ ಷರತ್ತನ್ನ ಸಿದ್ದರಾಮಯ್ಯಗೆ ಹಾಕಲಾಗಿದೆ. ಒಲ್ಲದ ಮನಸ್ಸಿನಿಂದ ಸಿದ್ದರಾಮಯ್ಯ ಈ ಷರತ್ತಿಗೆ ಒಪ್ಪಿಕೊಂಡಿದ್ದಾರೆ.
Advertisement
ಬಹುತೇಕ ಶಾಸಕರು ಸಿದ್ದರಾಮಯ್ಯ ಪರ ಇರುವುದರಿಂದ ಸಿಎಲ್‍ಪಿ ಬದಲಾವಣೆ ಸನ್ನಿವೇಶ ಸೃಷ್ಟಿ ಆಗಲಾರದು ಎಂಬೂದು ಸಿದ್ದರಾಮಯ್ಯ ನಂಬಿಕೆ. ಆದ್ದರಿಂದ ಹೈಕಮಾಂಡ್ ಷರತ್ತು ವಿಧಿಸಿದರೂ ಸಿದ್ದರಾಮಯ್ಯ ಓಕೆ ಅಂದಿದ್ದಾರೆ. ಒಟ್ಟಿನಲ್ಲಿ ತಮ್ಮ ಹಠದಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದು, ರಾಜ್ಯ ಕಾಂಗ್ರೆಸ್ ಮಟ್ಟಿಗೆ ಈಗಲೂ ನಾನೇ ಪವರ್ ಫುಲ್ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡುವುದು ಬಹುತೇಕ ಖಚಿತವಾಗಿದೆ.