ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಮೊದಲ ದಿನದ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳ ವಿಚಾರಣೆ ಕೇವಲ ಒಂದು ಗಂಟೆಯಲ್ಲಿಯೇ ಅಂತ್ಯವಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ವಶಕ್ಕೆ ಪಡೆದಿದ್ದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಅವರಿಗೂ ಸ್ವಲ್ಪ ಕಾಲಾವಕಾಶ ಬೇಕು. ಅದಕ್ಕಾಗಿ ನಾನು ಕೂಡ ಮೂರು ದಿನ ಸಮಯ ಕೇಳಿದ್ದೇನೆ. ಮೂರು ದಿನದ ಬಳಿಕ ಸಮನ್ಸ್ ನೀಡಿದರೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು.
ಇದೇ ವೇಳೆ ತಮ್ಮ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಣಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಂ, ಈ ಪ್ರಕರಣದ ಬಗ್ಗೆ ವಿಶೇಷ ತನಿಖೆಯ ಅವಶ್ಯಕತೆ ಇದೆ. ಕೆಲವೊಬ್ಬರು ನಾನೇ ಕೊಲೆ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ನಾನು ಅವನ ಹೆಸರಲ್ಲಿ ಬೇನಾಮಿ ಮಾಡಿದ್ದೇನೆ ಅಂತಾನೂ ಹೇಳುತ್ತಾರೆ. ಅದಕ್ಕೆ ಭಯ ಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿ ಬರುತ್ತಿದೆ. ಈ ಸಂಬಂಧ ನನ್ನ ಮೇಲೆ ಈ ಆರೋಪಗಳು ಬೇಡ. ಸತ್ಯಾಸತ್ಯತೆ ತಿಳಿದುಕೊಳ್ಳಲು ತನಿಖೆಯ ಅಗತ್ಯತೆ ಇದೆ. ಅವನು ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡ ಅನ್ನೋದನ್ನ ನಾನು ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಇಂದು ಹನ್ನೊಂದು ಗಂಟೆ ಸುಮಾರಿಗೆ ಪರಮೇಶ್ವರ್ ಬೆಂಗಳೂರಿನ ಐಟಿ ಕಚೇರಿಗೆ ಹಾಜರಾಗುವಂತೆ ಐಟಿ ಇಲಾಖೆ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಮೊದಲಾದ ಪಂಚನಾಮೆಯ ದಾಖಲಾತಿಯೊಂದಿಗೆ ಪರಮೇಶ್ವರ್ ಇಂದು ಬೆಳಗ್ಗೆ 10 ಗಂಟೆಗೆ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. 11 ಗಂಟೆಗೆ ವಿಚಾರಣೆ ಅಂತ್ಯವಾಗಿದೆ.