ಬೆಂಗಳೂರು: ವಿರೋಧ ಪಕ್ಷದ ನಾಯಕ ಹಾಗೂ ಸಿಎಲ್‍ಪಿ ನಾಯಕರ ಆಯ್ಕೆ ವಿಷಯದಲ್ಲಿ ಅಧಿಕಾರ ಹಂಚಿಕೆ ಆಗಬೇಕು. ಅದೇ ರೀತಿಯಲ್ಲಿ ಕೆಪಿಸಿಸಿಗೆ ಅಧ್ಯಕ್ಷರಷ್ಟೇ ಅಲ್ಲದೆ ಕಾರ್ಯಾಧ್ಯಕ್ಷರು ಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮುನಿಯಪ್ಪ ಹೇಳಿದ್ದಾರೆ.
ಆ ಮೂಲಕ ವಿಪಕ್ಷ ನಾಯಕ ಹಾಗೂ ಸಿಎಲ್‍ಪಿ ನಾಯಕನ ಸ್ಥಾನ ಪ್ರತ್ಯೇಕಿಸುವುದು ಬೇಡ ಎಂದ ಸಿದ್ದರಾಮಯ್ಯಗೆ ಮೂಲ ಕಾಂಗ್ರೆಸ್ಸಿಗರು ಟಾಂಗ್ ನೀಡಿದ್ದಾರೆ. ಇನ್ನೊಂದು ಕಡೆ ಕಾರ್ಯಾಧ್ಯಕ್ಷ ಬೇಡ ಕೆಪಿಸಿಸಿ ಅಧ್ಯಕ್ಷ ಮಾತ್ರ ಇರಲಿ ಎನ್ನುತ್ತಿರುವ ಮೂಲ ಕಾಂಗ್ರೆಸ್ಸಿಗರು ಡಿಕೆಶಿಗೂ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಹೇಳುವಂತೆ ನಾಲ್ಕು ಕಾರ್ಯಾಧ್ಯಕ್ಷರ ಅವಶ್ಯಕತೆ ಇಲ್ಲ. ಆದರೆ ಒಬ್ಬರು ಅಥವಾ ಇಬ್ಬರು ಕಾರ್ಯಾಧ್ಯಕ್ಷರು ಬೇಕು ಎಂದು ಡಿಕೆಶಿಗೆ ಟಕ್ಕರ್ ಕೊಟ್ಟಿದ್ದಾರೆ.
ಅಧಿಕಾರ ಹಂಚಿಕೆ ಮಾಡಿಕೊಂಡು ಕೆಲಸ ಮಾಡೋದು ಆರೋಗ್ಯಕರ. ಸಾಕಷ್ಟು ಹಿರಿಯ ನಾಯಕರಿದ್ದಾರೆ. ಅಧಿಕಾರ ಹಂಚಿಕೆ ಆದರೆ ಒಳ್ಳೆಯದು. ಎಲ್ಲಾ ಹಿರಿಯರಿಗೂ ಅವಕಾಶ ಕೊಡಲು ಸಾಧ್ಯ ಆಗದಿದ್ರೂ, ಅಧಿಕಾರ ಹಂಚಿಕೆಯಿಂದ ಕೆಲವರಿಗಾದರೂ ಅವಕಾಶ ಸಿಗುತ್ತದೆ. ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನವನ್ನು ಪ್ರತ್ಯೇಕಿಸಿದರೆ ಒಳ್ಳೆಯದೆ. ಅರ್ಹರು, ಎಲ್ಲರಿಗೂ ಅವಕಾಶ ಸಿಕ್ಕಂತಾಗುತ್ತದೆ. ಪಕ್ಷದ ಹಿತ ದೃಷ್ಟಿಯಿಂದ ಆದಷ್ಟು ಬೇಗ ಅಧ್ಯಕ್ಷರನ್ನ ನೇಮಕ ಮಾಡಬೇಕು. ಕಾರ್ಯಾಧ್ಯಕ್ಷ ಹುದ್ದೆ ಸಾಮಾನ್ಯವಾಗಿ ಒಂದು, ಎರಡು ಇರುತ್ತೆ. ಈಗಲೂ ಒಬ್ಬರು ಕಾರ್ಯಾಧ್ಯಕ್ಷರು ಇದ್ದಾರೆ. ಪಕ್ಷಕ್ಕೆ ಅಧ್ಯಕ್ಷರು ಮುಖ್ಯ, ಅಧ್ಯಕ್ಷರಿಗೆ ಸಹಾಯ ಮಾಡ್ಲಿ ಅಂತಾ ಕಾರ್ಯಾಧ್ಯಕ್ಷರ ನೇಮಕ ಮಾಡುತ್ತದೆ. ಒಂದು, ಎರಡು ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕಕ್ಕೆ ನಮ್ಮ ಅಭ್ಯಂತರ ಇಲ್ಲ.ನಾಲ್ಕೈದು ಕಾರ್ಯಾಧ್ಯಕ್ಷರ ನೇಮಕ ಮಾಡಿ ಅಂತ ಸಿದ್ದರಾಮಯ್ಯ ಹೇಳಿದ್ರೆ, ಅದು ಅವರ ಅಭಿಪ್ರಾಯ ಎಂದಿದ್ದಾರೆ.