ಬೆಂಗಳೂರು: ಈ ಹಿಂದೆ ಚಾಣಕ್ಯನನ್ನು ಬಂಧಿಸಿದಾಗ ಎದುರಾದ ರಾಜಕೀಯ ಆರೋಪದಂತೆ ಇದೀಗ ಡಿಕೆಶಿ ಬಂಧನವಾದಾಗಲೂ ಎದುರಾಗಿದೆ. ಎಲ್ಲಾ ಸಂಕಷ್ಟ ಎದುರಿಸಿದ್ದ ಚಾಣಕ್ಯ ಆ ಬಳಿಕ ರಾಷ್ಟ್ರ ಮಟ್ಟದಲ್ಲೇ ಪಕ್ಷವನ್ನು ಹಿಡಿದೆತ್ತಿ ಸೈ ಅನ್ನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಾಣಕ್ಯನ ಮಾದರಿಯಲ್ಲೇ ಪವರ್ ಫುಲ್ ಲೀಡರ್ ಆಗಿ ಟ್ರಬಲ್ ಶೂಟರ್ ಹೊರ ಹೊಮ್ಮುತ್ತಾರಾ ಎಂಬ ಅನುಮಾನವೊಂದು ಕಾಡುತ್ತಿದೆ.
ಹೌದು. ದೇಶಾದ್ಯಂತ ಬಿಜೆಪಿ ಸಂಕಷ್ಟದಲ್ಲಿದ್ದಾಗ ಅಮಿತ್ ಶಾ ಅವರು ಗುಜರಾತ್ ಗೃಹ ಸಚಿವರಾಗಿದ್ದರು. ಆಗ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಅಮಿತ್ ಶಾ, ಜೈಲಿಂದ ಬಂದ ನಂತರ ಪವರ್ ಫುಲ್ ಲೀಡರ್ ಆಗಿ ಬೆಳೆದರು. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ರಾಷ್ಟ್ರ ಅಧ್ಯಕ್ಷರಾಗಿ, ಕೇಂದ್ರ ಗೃಹ ಸಚಿವರೂ ಆದರು.
ವಿಶೇಷವಾಗಿ ಸೋತು ಸೊರಗಿದ್ದ ಬಿಜೆಪಿಗೆ ದೇಶಾದ್ಯಂತ ಶಕ್ತಿ ತುಂಬಿ ಬಿಜೆಪಿಯ ಗೆಲುವಿನ ಶಕ್ತಿಯಾಗಿ ಹೊರ ಹೊಮ್ಮಿದ್ದರು. ಈಗ ದೇಶಾದ್ಯಂತ ಕಾಂಗ್ರೆಸ್ ಪ್ರಭಾವ ಕಡಿಮೆಯಾಗಿದೆ. ರಾಜ್ಯ ರಾಜಕಾರಣದಲ್ಲಿ ಪವರ್ ಫುಲ್ ಆಗಿರುವ ಡಿಕೆಶಿ ರಾಷ್ಟ್ರ ಮಟ್ಟದಲ್ಲೂ ತಮ್ಮದೇ ಆದ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ಡಿಕೆಶಿ ಬಂಧನದ ವಿಚಾರವೂ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದರಿಂದ ಕಾಂಗ್ರೆಸ್ ಡಿಕೆಶಿ ವಿಷಯದಲ್ಲಿ ಗಂಭೀರವಾಗಿ ಯೋಚಿಸತೊಡಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇಡಿಯಿಂದ ಬಿಡುಗಡೆಯಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರಾಗಿ ಪಟ್ಟಾಭಿಷೇಕ ಮಾಡುವ ಸಾಧ್ಯತೆ ಇದೆ. ಡಿಕೆಶಿ ವಿರುದ್ಧ ಸೇಡಿನ ರಾಜಕಾರಣ ಮಾಡಲಾಯ್ತು. ಇದನ್ನು ಸಿಂಪಥಿಯಾಗಿ ಪರಿವರ್ತಿಸಿ ಡಿಕೆಶಿಗೆ ಪಕ್ಷದ ಅಧ್ಯಕ್ಷ ಸ್ಥಾನದ ಪಟ್ಟಾಭಿಷೇಕ ಮಾಡಿ ಆ ಮೂಲಕ ರಾಜ್ಯದಲ್ಲಿ ಅಧಿಕಾರವನ್ನ ಹಿಡಿಯುವ ಪ್ಲಾನ್ ಕಾಂಗ್ರೆಸ್ ನದ್ದಾಗಿದೆ.
ಅಗತ್ಯ ಬಿದ್ದರೆ ರಾಷ್ಟ್ರ ಮಟ್ಟದಲ್ಲಿ ಕೂಡ ಡಿಕೆಶಿಯನ್ನ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ಈ ಎಲ್ಲಾ ಬೆಳವಣಿಗೆಯನ್ನ ನೋಡಿದರೆ ಡಿ.ಕೆ ಶಿವಕುಮಾರ್ ಇಂದಿನ ಸ್ಥಿತಿಗೂ ಅಮಿತ್ ಶಾ ಅಂದಿನ ಸ್ಥಿತಿಗೂ ಸಾಮ್ಯತೆ ಇದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ ಶಿವಕುಮಾರ್ ಅವರನ್ನ ಹೇಗೆ ಬಳಸಿಕೊಳ್ಳುತ್ತೋ ಗೊತ್ತಿಲ್ಲ. ಆದರೆ ಡಿಕೆಶಿ ಪಾಲಿಗೆ ಹೈ ಕಮಾಂಡ್ ನಿಂದ ಭರ್ಜರಿ ಗಿಫ್ಟ್ ಮಾತ್ರ ಸಿದ್ಧವಾಗಿದೆ ಎಂಬುದಾಗಿ ತಿಳಿದುಬಂದಿದೆ.