– ನಾಳೆ ಮಂಗ್ಳೂರಿಗೆ ಸಿಎಂ
ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಇಂದು ಕೂಡ ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆವರೆಗೂ ಯಾವುದೇ ಅಧಿಕೃತ ಕಾರ್ಯಕ್ರಮ ಹಾಕಿಕೊಳ್ಳದೇ ಧವಳಗಿರಿ ನಿವಾಸದಲ್ಲಿಯೇ ಇರಲಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ಭದ್ರತೆಗಳ ಬಗ್ಗೆ ಸಿಎಂ ಮನೆಯಲ್ಲಿ ಇದ್ದೇ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದಿಂದ ಆತಂಕಗೊಂಡಿರುವ ಸಿಎಂ ಮಂಗಳೂರಿನಲ್ಲಿ ಮತ್ತೆ ಇಂತಹ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ರವಾನಿಸಿದ್ದಾರೆ.
Advertisement
Advertisement
ಈಗಾಗಲೇ ಮಂಗಳೂರಿಗೆ ಹಿರಿಯ ಐಪಿಎಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆಯವರನ್ನು ಉಸ್ತುವಾರಿಯಾಗಿ ಸರ್ಕಾರ ನಿಯೋಜಿಸಿದೆ. ಮಂಗಳೂರಿನಲ್ಲಿ ಪ್ರತಿಭಟನೆ, ಹಿಂಸಾಚಾರ ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ.
Advertisement
ಮಂಗಳೂರು ಪ್ರತಿಭಟನೆಗಳಿಂದ ರಾಜ್ಯದಲ್ಲಿ ಸೂಕ್ಷ್ಮ ಸನ್ನಿವೇಶ ಉಂಟಾಗಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸಚಿವರು, ಶಾಸಕರಿಗೂ ಖಡಕ್ ಸೂಚನೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಕೊಡುವಾಗ ಎಚ್ಚರ ವಹಿಸಬೇಕು. ಮತೀಯ ಭಾವನೆಗಳನ್ನು ಕೆರಳಿಸುವ ಹೇಳಿಕೆಗಳನ್ನು ಕೊಡಬಾರದು ಸೂಚನೆ ನೀಡಿದ್ದಾರೆ.
Advertisement
ಮೊನ್ನೆಯಿಂದಲೂ ವಿವಾದಾತ್ಮಕ ಹೇಳಿಕೆಗಳನ್ನು ಕೆಲವು ಸಚಿವರು, ಶಾಸಕರು ಕೊಡುತ್ತಿದ್ದು, ಸಚಿವ ಸಿ ಟಿ ರವಿ, ಶಾಸಕ ರೇಣುಕಾಚಾರ್ಯ ಸೇರಿ ಕೆಲವರ ಹೇಳಿಕೆಗಳಿಂದ ಸಿಎಂ ಗರಂ ಆಗಿದ್ದಾರೆ. ಕಾಯ್ದೆ ಬಗ್ಗೆ ಗೊಂದಲ ಬಗೆಹರಿಸುವ ಮಾತಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಿಎಂ ತಾಕೀತು ಮಾಡಿದ್ದಾರೆ.
ಈ ಮಧ್ಯೆ ಸಿಎಂ ಯಡಿಯೂರಪ್ಪ ಅಧಿಕೃತ ವೇಳಾಪಟ್ಟಿಯ ಪ್ರಕಾರ ನಾಳೆ ಮಂಗಳೂರಿಗೆ ಭೇಟಿ ಕೊಡುವ ಕಾರ್ಯಕ್ರಮ ನಿಗದಿಯಾಗಿದೆ. ಒಂದೊಮ್ಮೆ ನಾಳೆ ಮಂಗಳೂರಿಗೆ ಸಿಎಂ ಮಂಗಳೂರಿಗೆ ಹೋದರೆ, ಮಂಗಳೂರು ಡಿಸಿ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ. ಇದೇ ವೇಳೆ ಮಂಗಳೂರು ಜನಪ್ರತಿನಿಧಿಗಳು, ಜಿಲ್ಲಾ ಮುಸ್ಲಿಂ ಮುಖಂಡರ ಜೊತೆಗೂ ಸಿಎಂ ಸಭೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ಇಂದು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಪರಿಸ್ಥಿತಿ ಹತೋಟಿಗೆ ತರಲು ಸೂಚನೆ ಕೊಟ್ಟಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಯಾವುದೇ ಸಮಸ್ಯೆ ಯಾಗುವುದಿಲ್ಲ. ಈ ಬಗ್ಗೆ ಜಿಲ್ಲೆಯಲ್ಲೇ ಉಳಿದು, ಬೇರೆ ಪಕ್ಷದ ನಾಯಕರ ಜೊತೆ ಮಾತನಾಡಿ ಮಂಗಳೂರಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಯಾರೂ ಪ್ರಚೋದನಾಕಾರಿ ಹೇಳಿಕೆ ಕೊಡದಂತೆ ನೋಡಿಕೊಳ್ಳಿ ಎಂದಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಕೆಲಸ ಮಾಡಿ ಎಂದು ದೂರವಾಣಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿಗೆ ಸೂಚನೆ ಕೊಟ್ಟಿರುವ ಸಿಎಂ, ಮಂಗಳೂರಿನ ಪರಿಸ್ಥಿತಿ ಬಗ್ಗೆ ಆಗಾಗ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.