ಬೆಂಗಳೂರು: ಕಳೆದ ವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಎಫೆಕ್ಟ್ ಸಿಎಂ ಯಡಿಯೂರಪ್ಪ ಮೇಲೆ ಸರಿಯಾಗಿಯೇ ಬೀರಿದೆ. ಕಳೆದ ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು ಸಿಎಂ ಯಡಿಯೂರಪ್ಪ ಎದುರೇ ಮೊದಲ ಸಲ ಆಡಳಿತದ ವಿರುದ್ಧ ತಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸಿದ್ದರು. ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಸಿಎಂ ಮತ್ತು ಸಚಿವರು ಶಾಸಕರ ಭೇಟಿಗೆ ಅವಕಾಶ ಕೊಡುತ್ತಿಲ್ಲ ಅನ್ನೋದು ಬಹಳಷ್ಟು ಬಿಜೆಪಿ ಶಾಸಕರ ದೂರು ದುಮ್ಮಾನವಾಗಿತ್ತು.
ಇದೀಗ ಮುಖ್ಯಮಂತ್ರಿಗಳು ಶಾಸಕರ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಸೋಮವಾರದಿಂದ ಸಿಎಂ ಯಡಿಯೂರಪ್ಪ ಅವರು ತಮ್ಮ ಧವಳಗಿರಿ ನಿವಾಸದಲ್ಲಿ ಜಿಲ್ಲಾವಾರು ಶಾಸಕರ ಸಭೆಗಳನ್ನು ನಡೆಸುತ್ತಿದ್ದಾರೆ. ಆ ಮೂಲಕ ಶಾಸಕರ ಬೇಡಿಕೆಗಳನ್ನು ಪರಿಗಣಿಸಿ ಪರಿಹರಿಸುವ ಜೊತೆಗೇ ಶಾಸಕರ ಅಸಮಾಧಾನಗಳನ್ನೂ ಹೋಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದು, ಶಾಸಕರ ಜೊತೆ ಒನ್ ಟು ಒನ್ ಮಾತುಕತೆ ನಡೆಸುತ್ತಿದ್ದಾರೆ.
Advertisement
Advertisement
ಸೋಮವಾರ ಸಂಜೆ ನಾಲ್ಕು ಜಿಲ್ಲೆಗಳ ಬಿಜೆಪಿ ಶಾಸಕರನ್ನು ಸಿಎಂ ಯಡಿಯೂರಪ್ಪ ಅವರು ತಮ್ಮ ಧವಳಗಿರಿ ನಿವಾಸಕ್ಕೆ ಕರೆದು ಮಾತುಕತೆ ನಡೆಸಿದರು. ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆದು ನಿನ್ನೆ ಸಿಎಂ ಒನ್ ಟು ಒನ್ ಮಾತುಕತೆ ನಡೆಸಿದರು. ಒನ್ ಟು ಒನ್ ವೇಳೆ ಸರ್ಕಾರದ ಕಾರ್ಯವೈಖರಿ ಶಾಸಕರಿಗೆ ಇಷ್ಟವಿದೆಯೋ ಅಥವಾ ಏನಾದ್ರು ಅಸಮಾಧಾನವಿದೆಯೋ ಎಂಬುದರ ಬಗ್ಗೆಯೂ ಸಿಎಂ ಬಿಎಸ್‍ವೈ ಅಭಿಪ್ರಾಯ ಸಂಗ್ರಹಿಸಿದರು ಎನ್ನಲಾಗಿದೆ.
Advertisement
ಶಾಸಕರ ಕ್ಷೇತ್ರದ ಏನೇ ಅಭಿವೃದ್ಧಿ ಕಾರ್ಯಗಳು ಇದ್ದರೆ ನೇರವಾಗಿ ಬಂದು ಸಿಎಂ ಭೇಟಿಯಾಗಲು ಶಾಸಕರಿಗೆ ಸಿಎಂ ಇದೇ ವೇಳೆ ಸೂಚನೆ ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ. ಶಾಸಕರಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಯಾವುದೂ ಇರಕೂಡದು ಅಂತಲೂ ಹೇಳ್ತಿದ್ದಾರೆ ಎನ್ನಲಾಗಿದೆ. ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಹಾಗೂ ತಮ್ಮ ಪುತ್ರನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹಲವು ಶಾಸಕರ ಜೊತೆ ನೇರವಾಗಿ ಸಮಾಲೋಚನೆ ನಡೆಸೋ ಮೂಲಕ ಪಕ್ಷದ ಶಾಸಕರ ವಿಶ್ವಾಸಗಳಿಸಲು ಸಿಎಂ ಮುಂದಾಗಿದ್ದಾರೆ.
Advertisement
ಇಂದೂ ಕೂಡ ನಾಲ್ಕು ಜಿಲ್ಲೆಗಳ ಪಕ್ಷದ ಶಾಸಕರ ಜೊತೆ ಸಿಎಂ ಒನ್ ಟು ಒನ್ ಚರ್ಚೆ ನಡೆಸಲಿದ್ದಾರೆ. ಇಂದು ಬಾಗಲಕೋಟೆ, ವಿಜಯಪುರ, ಗದಗ, ಬಳ್ಳಾರಿ ಜಿಲ್ಲೆಗಳ ಬಿಜೆಪಿ ಶಾಸಕರ ಜೊತೆ ಸಿಎಂ ಮಾತುಕತೆ ನಡೆಸಲಿದ್ದಾರೆ. ನಿನ್ನೆಯಿಂದಲೂ ನಿತ್ಯ ಸಂಜೆ ಅಧಿವೇಶನದ ಕಲಾಪಗಳು ಮುಕ್ತಾಯವಾದ ಬಳಿಕ ಶಾಸಕರ ಜೊತೆ ಸಿಎಂ ಬಿಎಸ್‍ವೈ ಸಮಾಲೋಚನೆ ನಡೆಸುತ್ತಿದ್ದಾರೆ.
ಜಿಲ್ಲಾವಾರು ಸಭೆಗಳಲ್ಲಿ ಆಯಾಯ ಶಾಸಕರ ಕ್ಷೇತ್ರಗಳಿಗೆ ನೀಡಿದ ಅನುದಾನ, ಮಾಡಿದ ಅಭಿವೃದ್ಧಿ ಬಗ್ಗೆ ಅಂಕಿ ಅಂಶಗಳನ್ನು ಸಹ ಶಾಸಕರಿಗೆ ಸಿಎಂ ಕೊಡುತ್ತಿದ್ದಾರೆನ್ನಲಾಗಿದೆ. ನಿನ್ನೆಯಿಂದ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದರೂ ಯಾರೊಬ್ಬ ಶಾಸಕರೂ ಅದರ ಬಗ್ಗೆ ಚರ್ಚೆ ನಡೆಸಲು ನಿರಾಕರಿಸುತ್ತಿದ್ದಾರೆ. ಸಿಎಂ ಜೊತೆಗಿನ ಜಿಲ್ಲಾವಾರು ಸಭೆಗಳ ಬಗ್ಗೆ ಶಾಸಕರು ರಹಸ್ಯ ಕಾಪಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.