ಬೆಂಗಳೂರು: ಬೌರಿಂಗ್ ಕ್ಲಬ್, ಟರ್ಫ್ ಕ್ಲಬ್, ಗಾಲ್ಫ್ ಕ್ಲಬ್ ಸೇರಿದಂತೆ ಬೆಂಗಳೂರಿನ ಕ್ಲಬ್ ಗಳ ಕುರಿತು ಇವತ್ತು ವಿಧಾನ ಪರಿಷತ್ ಕಲಾಪದಲ್ಲಿ ಪಕ್ಷಾತೀತವಾಗಿ ಚರ್ಚೆ ನಡೆಯಿತು. ಕ್ಲಬ್ ಗಳ ವರ್ತನೆಗೆ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ ಸದಸ್ಯರು ಕ್ಲಬ್ ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆಗೆ ಒತ್ತಾಯ ಮಾಡಿದರು. ಸದಸ್ಯರ ಮನವಿಗೆ ಸ್ಪಂದನೆ ನೀಡಿದ ಸಹಕಾರ ಸಚಿವ ಸೋಮಶೇಖರ್ ಸದನ ಸಮಿತಿ ರಚನೆಯ ಘೋಷಣೆ ಮಾಡಿದರು.
ಕಾಂಗ್ರೆಸ್ ಸದಸ್ಯ ಎಚ್.ಎಂ ರೇವಣ್ಣ ಬೆಂಗಳೂರಿನ ಕ್ಲಬ್‍ಗಳ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಬೆಂಗಳೂರಿನ ಕ್ಲಬ್‍ಗಳ ಬಗ್ಗೆ ಸದನದ ರೇವಣ್ಣ ಅವರು ಮಾಹಿತಿ ಬಿಚ್ಚಿಟ್ಟರು. ಬೌರಿಂಗ್ ಕ್ಲಬ್ ಸೇರಿದಂತೆ ಇನ್ನಿತರ ಕ್ಲಬ್‍ನಲ್ಲಿ ಡ್ರೆಸ್ ಕೋಡ್ ಇದೆ. ಸೂಟ್ ಹಾಕಿಕೊಂಡು ಹೋಗಬೇಕಂತೆ. ಬಿಳಿ ಬಟ್ಟೆ ಹಾಕಿಕೊಂಡು ಹೋಗುವ ಆಗಿಲ್ಲ. ಖಾದಿ ಬಟ್ಟೆ ಹಾಕಿಕೊಂಡರೆ ಕ್ಲಬ್ ಎಂಟ್ರಿ ಇಲ್ಲವಂತೆ ಅಂತ ಕ್ಲಬ್ ಗಳ ವರ್ತನೆ ವಿರುದ್ದ ಅಸಮಾಧಾನ ಹೊರ ಹಾಕಿದರು.
ರೇವಣ್ಣ ಮಾತಿಗೆ ಮತ್ತೊಬ್ಬ ಸದಸ್ಯ ಪ್ರಕಾಶ್ ರಾಥೋಡ್ ಧ್ವನಿಗೂಡಿಸಿದರು. ಐಎಎಸ್ ಅಧಿಕಾರಿಗಳಿಗೆ ಕ್ಲಬ್ ಇದೆ. ಮಹಿಳೆಯರು ಕ್ಲಬ್ ಮಾಡಿಕೊಂಡಿದ್ದಾರೆ. ಶಾಸಕರಿಗೂ ಒಂದು ಕ್ಲಬ್ ಬೇಕು. ನಾವು ವ್ಯಾಯಾಮ ಮಾಡೋದು ಬೇಡವಾ? ನಾವು ರೆಸ್ಟ್ ಮಾಡೋದು ಬೇಡವಾ ಶಾಸಕರಿಗೂ ಕ್ಲಬ್ ಮಾಡಿಕೊಡಿ ಎಂದು ಸಚಿವ ಸೋಮಶೇಖರ್ ಗೆ ಪ್ರಕಾಶ್ ರಾಥೋಡ್ ಒತ್ತಾಯ ಮಾಡಿದರು.
ಜೆಡಿಎಸ್ ಶ್ರೀಕಂಠೇಗೌಡ ಮಾತನಾಡಿ ಗಾಲ್ಫ್ ಕ್ಲಬ್ ಜಾಗದಲ್ಲಿ ಶಾಸಕರಿಗೆ ಕ್ಲಬ್ ಪ್ರಾರಂಭ ಮಾಡಿ. ನಾವು ವಾಕಿಂಗ್ ಮಾಡಬೇಕು, ಆಟ ಆಡಬೇಕು, ಊಟ ಮಾಡಬೇಕು.ನಮಗೂ ರಿಲ್ಯಾಕ್ಸ್ ಬೇಕು ಅಲ್ಲವಾ. ಹಿಂದೆ ಗಣೇಶ್ ಕಾರ್ಣಿಕ್ ಕ್ಲಬ್ ಗಾಗಿ ಹಣ ಸಂಗ್ರಹ ಮಾಡಿದರು. ಆದರೆ ಈವರೆಗೂ ಕ್ಲಬ್ ಆಗಿಲ್ಲ. ಶಾಸಕರ ಭವನಕ್ಕೂ ಹತ್ತಿರ ಇದೆ. ಗಾಲ್ಫ್ ಕ್ಲಬ್ ಜಾಗದಲ್ಲಿ ಶಾಸಕರಿಗೆ ಕ್ಲಬ್ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಜೆಡಿಎಸ್‍ನ ತಿಪ್ಪೇಸ್ವಾಮಿ ಗಾಲ್ಫ್ ಕ್ಲಬ್ ಬಗ್ಗೆ ಪ್ರಸ್ತಾಪ ಮಾಡಿದರು. ಅಧಿಕಾರಿಗಳೇ ಇವುಗಳ ನಿರ್ವಹಣೆ ಮಾಡುತ್ತಿದ್ದಾರೆ. ಬಾಡಿಗೆ ಸರಿಯಾಗಿ ಕೊಡ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದರು. ತಿಪ್ಪೇಸ್ವಾಮಿ ಮಾತಿಗೆ ಅಪ್ಪಾಜಿಗೌಡ, ನಾರಾಯಣಸ್ವಾಮಿ ಸೇರಿ ಹಲವರು ಧ್ವನಿಗೂಡಿಸಿದರು.ಇನ್ನು ಕಾಂಗ್ರೆಸ್ ನ ಸದಸ್ಯ ಇಟಗಿ ರೇಸ್ ಕೋರ್ಸ್ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು.
ಟರ್ಫ್ ಕ್ಲಬ್ ಲೀಸ್ ಅವಧಿ ಮುಗಿದಿದೆ. ಅದನ್ನು ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೆ ಅವರು ಹೈಕೋರ್ಟ್‍ಗೆ ಹೋಗಿದರು. ಹೈಕೋರ್ಟ್ ರಾಜ್ಯದ ಪರ ತೀರ್ಪು ಕೊಟ್ಟಿದೆ. ಅವರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ನಮ್ಮ ಸರ್ಕಾರದ ವಕೀಲರೇ ಕೇಸ್ ಮುಗಿಯೋವರೆಗೂ ರೇಸ್ ಕೋರ್ಸ್ ಮುಂದುವರಿಸಬಹುದು ಎಂದು ಅಫಿಡವಿಟ್ ಕೊಟ್ಟಿದ್ದಾರೆ ಇದು ನಾಚಿಕೆ ಸಂಗತಿ ಅಂತ ವಿರೋಧ ವ್ಯಕ್ತಪಡಿಸಿದರು.
ಬೆಂಗಳೂರಿನ ಬಹುತೇಕ ಕ್ಲಬ್ ಗಳು ನಮ್ಮ ಜಾಗ, ನಮ್ಮ ನೀರು, ನಮ್ಮ ವಿದ್ಯುತ್ ತೆಗೆದುಕೊಂಡಿವೆ. ಆದ್ರು ಧಿಮಾಕು ಪ್ರದರ್ಶನ ಮಾಡ್ತೀವಿ ಅಂತ ಸದಸ್ಯರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಸದಸ್ಯರ ಮನವಿ ಸ್ವೀಕಾರ ಮಾಡಿದ ಸಚಿವ ಸೋಮಶೇಖರ್, ನಾನು ಸಚಿವನಾದ ಮೇಲೆ ಕ್ಲಬ್ ನವರೇ ನಮ್ಮ ಬಳಿ ಬಂದು ದೂರು ಕೊಡೋಕೆ ಬರುತ್ತಾರೆ ನೀವು ಸ್ವಲ್ಪ ನೋಡಬೇಕು ಎಂದು ಹೇಳಲು ಬಂದಿದ್ದರು. ಯಾರೇ ನಿಯಮ ಮೀರಿದರೂ ಕ್ರಮ ತಗೆದುಕೊಳ್ಳುತ್ತೇನೆ. ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಕ್ಲಬ್‍ಗಳ ಮೇಲೆ ಕ್ರಮಕ್ಕಾಗಿ ಸದನ ಸಮಿತಿಗೆ ಸರ್ಕಾರ ಸಿದ್ದ ಎಂದು ಸದನ ಸಮಿತಿ ರಚನೆ ಮಾಡೋದಾಗಿ ಸದನದಲ್ಲಿ ಘೋಷಣೆ ಮಾಡಿದರು.