ಮಹಿಳೆಯರೇ ಎಚ್ಚರ – ಎಲ್ಲೆಡೆ ಹರಿದಾಡ್ತಿದೆ ಬೆಂಗ್ಳೂರು ಪೊಲೀಸ್ ಸಹಾಯವಾಣಿಯ ನಕಲಿ ನಂಬರ್

Public TV
2 Min Read
bengaluru police

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮಹಿಳಾ ಸಹಾಯವಾಣಿಯ ನಕಲಿ ನಂಬರ್. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳಿಂದ ಜಾಗೃತರಾಗಿರಿ ಎಂದು ಸ್ವತಃ ಬೆಂಗಳೂರು ಸಿಟಿ ಪೊಲೀಸರು(ಬಿಸಿಪಿ) ಟ್ವೀಟ್ ಮಾಡಿ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

ಹೈದರಾಬಾದ್ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ನಡೆದ ಮೇಲೆ ಎಲ್ಲಾ ರಾಜ್ಯದಲ್ಲಿಯೂ ಮಹಿಳೆಯರ ಸುರಕ್ಷತೆ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನೇ ದುರುಪಯೋಗ ಮಾಡಿಕೊಂಡ ದುಷ್ಕರ್ಮಿಗಳು, ಬೆಂಗಳೂರು ಪೊಲೀಸರು ಮಹಿಳಾ ಸಹಾಯವಾಣಿಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ನಕಲಿ ಫೋನ್ ನಂಬರ್ ಹಾಕಿ, ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ನಕಲಿ ಪೋಸ್ಟ್‌ನಲ್ಲಿ ಏನಿದೆ?
ರಾತ್ರಿ ವೇಳೆ ಮಹಿಳೆಯರಿಗೆ ಓಡಾಡಲು ವಾಹನ ಸಿಗದಿದ್ದರೆ ಅವರಿಗೆ ಬೆಂಗಳೂರು ಸಿಟಿ ಪೊಲೀಸರು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಬಹುದಾಗಿದೆ. ಈ ನಂಬರ್‍ಗೆ (1091 ಮತ್ತು 7837018555) ಕರೆ ಮಾಡಿ. ಪೊಲೀಸರು 24/7 ಕೆಲಸ ಮಾಡುತ್ತಿರುತ್ತಾರೆ. ನೀವು ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಕಂಟ್ರೋಲ್ ರೂಮ್, ಹತ್ತಿರದ ಪಿಸಿಆರ್ ವಾಹನ ಅಥವಾ ಎಸ್‍ಎಚ್‍ಒ ವಾಹನ ನೀವಿದ್ದಲ್ಲಿ ಬಂದು, ನಿಮ್ಮನ್ನು ಸುರಕ್ಷಿತವಾಗಿ ನೀವು ತಲುಬೇಕಾದ ಸ್ಥಳಕ್ಕೆ ತಲುಪಿಸುತ್ತದೆ. ಈ ಸೇವೆಯನ್ನು ಪೊಲೀಸರು ಉಚಿತವಾಗಿ ನೀಡುತ್ತಿದ್ದಾರೆ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡಿ ಎಂದು ಸುಳ್ಳು ಫೋನ್ ನಂಬರಿನೊಂದಿಗೆ ಸಂದೇಶ ಹರಿಬಿಡಲಾಗಿದೆ.

bengaluru market

ಬಿಸಿಪಿ ಟ್ವೀಟ್‍ನಲ್ಲಿ ಏನಿದೆ?
ಈ ಸುಳ್ಳು ಸುದ್ದಿ ಬೆಂಗಳೂರು ಸಿಟಿ ಪೊಲೀಸರ ಗಮನಕ್ಕೆ ಬಂದಿದ್ದು, ಈ ರೀತಿ ಯಾವುದೇ ಮಹಿಳಾ ಸಹಾಯವಾಣಿಯನ್ನು ನಾವು ಕಾರ್ಯರೂಪಕ್ಕೆ ತಂದಿಲ್ಲ. ಇದು ಸುಳ್ಳು ಸುದ್ದಿ. ಪೋಸ್ಟ್‌ನಲ್ಲಿ ಇರುವುದು ಪೊಲೀಸರ ನಂಬರ್ ಅಲ್ಲ, ನಕಲಿ ನಂಬರ್. ದಯವಿಟ್ಟು ಇಂತಹ ಸಂದೇಶ, ಪೋಸ್ಟ್‌ಗಳ ಬಗ್ಗೆ ಜಾಗೃತರಾಗಿರಿ.

ಸುಳ್ಳು ಸುದ್ದಿಗಳನ್ನು ನಂಬಬೇಡಿ, ಶೇರ್ ಮಾಡಬೇಡಿ. ಈ ರೀತಿ ಸುಳ್ಳು ಸಂದೇಶ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಸಿಟಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

social media 2

ಹಾಗೆಯೇ ಈ ಟ್ವೀಟ್‍ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಿರ್ಭಯಾ ನಂಬರ್ ಬಗ್ಗೆ ಕೇಳಿದಾಗ, ಅದು ಕೂಡ ನಕಲಿ ನಂಬರ್ ಎಂದು ಪೊಲೀಸರು ರೀ-ಟ್ವೀಟ್ ಮಾಡಿದ್ದಾರೆ. ಹೀಗಾಗಿ ವಾಟ್ಸಾಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ಹರಿದಾಡುವ ನಕಲಿ ನಂಬರ್‌ಗಳನ್ನು ಶೇರ್ ಮಾಡುವ ಮುನ್ನ ಅದನ್ನು ಪರಿಶೀಲಿಸಿ. ಒಂದು ವೇಳೆ ಈ ರೀತಿ ಮಹಿಳಾ ಸಹಾಯವಾಣಿಗಳನ್ನು ಕಾರ್ಯರೂಪಕ್ಕೆ ತಂದರೆ ಆ ಬಗ್ಗೆ ಪೊಲೀಸರೇ ಅಧಿಕೃತ ಮಾಹಿತಿ ನೀಡುತ್ತಾರೆ. ಆದ್ದರಿಂದ ಈ ರೀತಿ ಸುಳ್ಳು ಸಂದೇಶ, ಸುದ್ದಿಗಳ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *