ಬೆಂಗಳೂರು: ಖಾಕಿ ಸಮವಸ್ತ್ರದಲ್ಲಿ ರೀಲ್ಸ್ (Reels) ಮಾಡುವ ಪೊಲೀಸರಿಗೆ ಪೊಲೀಸ್ ಕಮಿಷನರ್ (Bengaluru Police Commissioner) ದಯಾನಂದ್ ಬಿಸಿ ಮುಟ್ಟಿಸಿದ್ದಾರೆ.
ಪೊಲೀಸರು ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ರೀಲ್ಸ್ ಸ್ಟಾರ್‌ಗೆ ಠಕ್ಕರ್ ಕೊಡುವ ಮಟ್ಟಕ್ಕೆ ಪೊಲೀಸರು ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿ ಸಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಳ್ತಾ ಇದ್ದಾರೆ. ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿ ಸ್ಟಾರ್ ಆಗೋ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಒಂದೇ ರಾತ್ರಿ 6 ಮನೆ, 2 ದೇವಸ್ಥಾನ ಕಳ್ಳತನ ಮಾಡಿದ ಚಡ್ಡಿಗ್ಯಾಂಗ್
ಇಲಾಖೆಗೆ ಸಂಬಂಧಪಡದ ವಿಷಯಗಳನ್ನ ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುವ ಹಾಗಿಲ್ಲ. ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿದ್ರೆ ಅಶಿಸ್ತು ತೋರಿಸುತ್ತೆ. ಹಾಗಾಗಿ ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಆದೇಶ ಉಲ್ಲಂಘನೆ ಮಾಡಿ ಅಶಿಸ್ತು ತೋರಿಸುವ ಸಿಬ್ಬಂದಿ ಮೇಲೆ ನಿಗಾ ಇಡಲು ಸೂಚನೆ ಕೊಡಲಾಗಿದೆ. ಪೊಲೀಸ್ ಕರ್ತವ್ಯಗಳಿಗೆ ಸಂಬಂಧಿಸದ ವಿಷಯಗಳಲ್ಲಿ ಫೋಟೊ, ರೀಲ್ಸ್ ಅಪ್ಲೋಡ್ ಮಾಡುವಂತಿಲ್ಲ. ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಇಲ್ಲ: ಎಂಬಿ ಪಾಟೀಲ್
ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಡಿಜಿಟಲ್ ಫೋರಮ್‌ನಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಹಾಗಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆಯನ್ನ ಕೊಡಲಾಗಿದೆ.