ಬೆಂಗಳೂರು: ತೇಜಸ್ವಿ ಸೂರ್ಯ ಎದೆ ಬಗೆದರೆ ಏನೂ ಸಿಗಲ್ಲ, ಆದರೆ ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುವ ನಮ್ಮ ಎದೆ ಬಗೆದರೆ ತ್ರಿವರ್ಣ ಧ್ವಜ ಕಾಣಿಸುತ್ತೆ. ಹೀಗಂತ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹೋರಾಟದ ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ವಾಗ್ದಾಳಿ ನಡೆಸಿದರು.
ಎದೆ ಬಗೆದರೆ ನಾಲ್ಕಕ್ಷರ ಇಲ್ಲದ, ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡೋರು ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕೊಟ್ಟಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇಂದು ಬೆಂಗಳೂರಿನಲ್ಲಿ ಸಿಎಎ ವಿರೋಧಿಸಿ ನಾವು ಭಾರತೀಯರು ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ಕೂಡ ತೇಜಸ್ವಿ ಸೂರ್ಯ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ತೇಜಸ್ವಿ ಸಣ್ಣ ವಯಸ್ಸಿಗೆ ಸಂಸದರಾದವರು. ಅವರ ಮಾತಿನ ಮೇಲೆ ನಾಲಗೆಯ ಮೇಲೆ ನಿಗಾ ಇಟ್ಟು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಸಿಎಎ, ಎನ್.ಪಿ.ಆರ್, ಎನ್.ಆರ್.ಸಿ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ನಡೆಸಿ ಪೋಸ್ಟ್ ಕಾರ್ಡ್ ಚಳವಳಿಯನ್ನು ಶುರುಮಾಡಿದರು. ಸುಪ್ರೀಂ ಕೊರ್ಟ್‍ಗೆ ಸಿಎಎ ವಿರೋಧಿಸಿ, ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದು ಕಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ, ಬಿಜೆಪಿ ಸರ್ಕಾರ ಇದನ್ನು ಹಿಂಪಡೆಯಬೇಕು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಬುದ್ದಿ ಹೇಳಲಿ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.