ಸರ್ಕಾರದ ವೈಫಲ್ಯದಿಂದ ಕಾಲ್ತುಳಿತ, ಪತಿ ಯಾವುದೇ ತಪ್ಪು ಮಾಡಿಲ್ಲ: ಕೋರ್ಟ್‌ ಮೊರೆ ಹೋದ ನಿಖಿಲ್‌ ಸೋಸಲೆ ಪತ್ನಿ

Public TV
1 Min Read
Nikhil Sosale

– ತನಿಖೆ ನಡೆಸದೇ ಬಂಧನ ಮಾಡಲಾಗಿದೆ
– ಹೈಕೋರ್ಟ್‌ಗೆ ಮಾಳವಿಕಾ ನಾಯ್ಕ್‌ ರಿಟ್‌ ಅರ್ಜಿ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede Case) ಬಂಧನಕ್ಕೆ ಒಳಗಾದ ಆರ್‌ಸಿಬಿಯ (RCB) ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ (Nikhil Sosale) ಪತ್ನಿ ಮಾಳವಿಕಾ ನಾಯ್ಕ್ ಸರ್ಕಾರದ ವಿರುದ್ಧವೇ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಆಧಾರವಾಗಿಸಿ ಮಾಳವಿಕಾ ನಾಯ್ಕ್ ರಿಟ್ ಅರ್ಜಿ ಸಲ್ಲಿಸಿ ಸರ್ಕಾರದ ವೈಫಲ್ಯದಿಂದ ಕಾಲ್ತುಳಿತ ಸಂಭವಿಸಿದೆ. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.  ಇದನ್ನೂ ಓದಿ: ಪರಾರಿಯಾಗುತ್ತಿದ್ದ ಆರ್‌ಸಿಬಿಯ ನಿಖಿಲ್‌ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌


ರಿಟ್‌ ಅರ್ಜಿಯಲ್ಲಿ ಏನಿದೆ?
2 ವರ್ಷದ ಮಗುವಿನೊಂದಿಗೆ ನಾವು ಪ್ರಯಾಣಿಸುತ್ತಿದ್ದಾಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯನವರ ಆದೇಶದ ಅನ್ವಯ ಪತಿಯನ್ನು ಬಂಧನ ಮಾಡಲಾಗಿದೆ.

ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸುವ ಮೊದಲೇ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಮಾತ್ರ ಬಂಧನ ಮಾಡಲಾಗಿದೆ. ಇದು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಅವರ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಹಾಗೂ ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ.

ಯಾವುದೇ ತನಿಖೆಯ ನಡೆಸದೇ ದುರಂತ ವೈಫಲ್ಯದ ಹೊಣೆಯನ್ನು ಆರ್‌ಸಿಬಿ ಮತ್ತು ಅದರ ಅಧಿಕಾರಿಗಳ ಮೇಲೆ ವರ್ಗಾಯಿಸುವ ಪ್ರಯತ್ನದ ಭಾಗವಾಗಿ ಬಂಧನ ಮಾಡಲಾಗಿದೆ.

 

ಈ ಕಾರ್ಯಕ್ರಮಕ್ಕೆ ಬರುವವರಿಗೆ ಆನ್‌ಲೈನ್ ಮೂಲಕ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವರಿಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ಅವಕಾಶ ಕಲ್ಪಿಸಲಾಗಿತ್ತು. ಖುದ್ದು ಡಿಸಿಎಂ ಆಟಗಾರರನ್ನು ವಿಮಾನನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ವಿಧಾನಸೌಧದಲ್ಲಿ ಸರ್ಕಾರವೇ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದೆ. ನಂತರ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು.

ದುರ್ಘಟನೆಯ ಮಾಹಿತಿ ಪ್ರಕಟವಾದ ತಕ್ಷಣ ಆರ್‌ಸಿಬಿಯಿಂದ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ನನ್ನ ಪತಿ ಯಾವುದೇ ಲೋಪ ಎಸಗಿಲ್ಲ. ಹೀಗಾಗಿ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಬೇಕು ಮತ್ತು ಕೂಡಲೇ ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

Share This Article