Connect with us

Bengaluru City

ಕಬ್ಬು ಬಾಕಿ ಪಾವತಿ, ಸಾಲಮನ್ನಾಗೆ ಆಗ್ರಹ- ಬೆಂಗಳೂರಿಗೆ ಬಂದಿಳಿದ ಅನ್ನದಾತರು

Published

on

– ಬೆಳಗಾವಿಯ ಖಾನಾಪುರ, ಐನಾಪುರದಲ್ಲಿ ಬಂದ್
– ಇಂದು ಸಚಿವ ಸಂಪುಟ ಸಭೆ

ಬೆಂಗಳೂರು: ಕಬ್ಬು ಬಾಕಿ ಪಾವತಿ, ಸಾಲಮನ್ನಾಕ್ಕೆ ಆಗ್ರಹಿಸಿ ಹೋರಾಟಕ್ಕಾಗಿ ವಿವಿಧ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಬಂದಿಳಿದಿದ್ದು, ರೈತಸಂಘದ ನೇತೃತ್ವದಲ್ಲಿ ಇಂದು ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಹೀಗಾಗಿ ಇಂದು ಬೆಂಗಳೂರಲ್ಲಿ ರೈತರ ಹಸಿರು ಹೋರಾಟ ಜೋರಾಗೋ ಸಾಧ್ಯತೆಗಳಿವೆ. ಪ್ರತಿಭಟನೆಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ರೈತರು ಸೇರುವ ಸಾಧ್ಯತೆ ಇದೆ. ರೈಲ್ವೆ ನಿಲ್ದಾಣದಿಂದ ನೇರವಾಗಿ ವಿಧಾನಸೌಧದತ್ತ ಹೊರಡಲಿದ್ದಾರೆ. ಈ ವೇಳೆ ಪೊಲೀಸರು ರೈತರನ್ನು ತಡೆದು ಫ್ರೀಂಡಂಪಾರ್ಕ್ ನತ್ತ ಕರೆದೊಯ್ಯವ ಸಾಧ್ಯತೆ ಹೆಚ್ಚಾಗಿದೆ. ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದ ಸಿಎಂಗೆ ಬಿಸಿ ಮುಟ್ಟಿಸಲು ಪ್ಲಾನ್ ಮಾಡಿದ್ದಾರೆ.

ಖಾನಾಪುರ ಬಂದ್ ಗೆ ಕರೆ:
ಇತ್ತ ಬೆಳಗಾವಿಯ ಖಾನಾಪುರದ ರೈತ ಮಹಿಳೆ ಜಯಶ್ರೀ ಬಗ್ಗೆ ಸಿಎಂ ಹಗುರ ಮಾತಿಗೆ ಖಂಡನೆ ಹಾಗೂ ರೈತ ಅಶೋಕ್ ಯಮಕನಮರಡಿ ಮೇಲೆ ಪೊಲೀಸರ ಹಲ್ಲೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣ ಬಂದ್‍ಗೆ ಕರೆ ನೀಡಲಾಗಿದೆ. ಮಹಾರಾಷ್ಟ್ರದಿಂದ ಕೈ ಶಾಸಕ ಶ್ರೀಮಂತಪಾಟೀಲ್ ಕಾರ್ಖಾನೆಗೆ ಕಬ್ಬು ಸಾಗಾಟ ತಡೆಯಲು ಹೋದ ರೈತರ ಮೇಲೆ 20 ಜನರಿಂದ ಕಲ್ಲು ತೂರಾಟ ನಡೆದಿದೆ. ರೊಚ್ಚಿಗೆದ್ದ ರೈತರಿಂದ ಕೃಷ್ಣಾ ಕೋ ಆಪರೇಟಿವ್ ಬ್ಯಾಂಕ್‍ನ ಬೋರ್ಡ್‍ಗೆ ಬೆಂಕಿ ಹಂಚಲಾಗಿದೆ. ಒಟ್ಟಿನಲ್ಲಿ ರೈತರ ಕೋಪ ಹೆಚ್ಚಾಗಿದ್ದು, ಖಾನಾಪುರದ ಜೊತೆಗೆ ಅಥಣಿಯ ಐನಾಪುರ ಬಂದ್‍ಗೆ ಕರೆ ಕೊಟ್ಟಿದ್ದಾರೆ.

ನಾಳೆ ಸಿಎಂ ಮೀಟಿಂಗ್:
ಬೆಳಗಾವಿಯ ಕಬ್ಬು ಹೋರಾಟಗಾರರ ಪ್ರತಿಭಟನೆಗೆ ಕೊನೆಗೂ ಸಿಎಂ ಕುಮಾರಸ್ವಾಮಿ ಮಣಿದಿದ್ದಾರೆ. ಹೋರಾಟದ ಫಲವಾಗಿ ಸಿಎಂ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ಕರೆದಿದ್ದಾರೆ. ನಾಳೆ ವಿಧಾನಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಈ ಹಿಂದೆ ಬೆಳಗಾವಿಗೆ ಬಂದು ಸಮಸ್ಯೆ ಆಲಿಸೋದಾಗಿ ಹೇಳಿದ್ದ ಸಿಎಂ, ಕೊನೆ ಕ್ಷಣದಲ್ಲಿ ಪ್ರವಾಸ ರದ್ದು ಮಾಡಿದ್ರು. ಇದ್ರಿಂದ ರೈತರು ರೊಚ್ಚಿಗೆದ್ದ ಹಿನ್ನೆಲೆಯಲ್ಲಿ ನಾಳೆ ಸಭೆ ಕರೆದಿದ್ದಾರೆ. ಬೆಳಗಾವಿಯಲ್ಲಿ ಭಾನುವಾರ ಪ್ರತಿಭಟನೆ ವೇಳೆ ರೈತರ ಮೇಲೆ ದೊಂಬಿ ಕೇಸ್ ಹಾಕಲು ಪೊಲೀಸರು ಮುಂದಾಗಿದ್ರು. ಆದ್ರೆ ನಂತ್ರ ಹಿರೇಬಾಗೇವಾರಿ ಠಾಣೆಯಲ್ಲಿ ನಡೆದ ಸಂಧಾನಸಭೆ ಯಶಸ್ವಿಯಾಗಿದ್ದು, ಕೇಸ್ ಹಾಕದಿರಲು ನಿರ್ಧಾರ ಕೈಗೊಳ್ಳಾಗಿದೆ. ಅದರಂತೆ ರೈತರು ನಾಳೆ ಸಿಎಂ ಕುಮಾರಸ್ವಾಮಿ ಕರೆದಿರುವ ಸಭೆಯಲ್ಲಿ ಭಾಗಿಯಾಗಲು ಸಮ್ಮತಿಸಿದ್ದಾರೆ.

ಇಂದು ಸಚಿವ ಸಂಪುಟ ಸಭೆ:
ರೈತರ ತೀವ್ರ ಹೋರಾಟದ ನಡುವೆಯೇ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಬೆಳಗಾವಿ ರೈತ ಹೋರಾಟವೇ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಇದಲ್ಲದೆ ರೈತರ ಹಾಗೂ ಹೋರಾಟನಿರತ ರೈತ ಮಹಿಳೆಗೆ ಸಿಎಂ ಬಳಸಿದ ಪದ ಬಳಕೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇತ್ತ ಕಬ್ಬು ಬಾಕಿ ಬೆಲೆಗಾಗಿ ಹೋರಾಡ್ತಿರೋ ರೈತರಿಗೆ ಬಾಕಿ ಕೊಡಿಸುವ ಕುರಿತು ಸಭೆಯಲ್ಲಿ ಮಹತ್ವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಹೋರಾಟನಿರತರನ್ನ ಪೊಲೀಸ್ ಬಂಧಿಸಿದ್ದು, ಕೇಸ್ ಹಾಕುವ ಅಥವಾ ವಾಪಸ್ ಪಡೆಯುವ ವಿಷಯ ಕೂಡಾ ಕ್ಯಾಬಿನೆಟ್‍ನಲ್ಲಿ ಚರ್ಚೆಗೆ ಬರಲಿದೆ. ಇದಲ್ಲದೆ ಮಹದಾಯಿ ನೀರು ಹಂಚಿಕೆ ಕುರಿತು ಪುನರ್ ಪರಿಶೀಲನೆ ಅರ್ಜಿಯಲ್ಲಿ ಮಾರ್ಪಾಡು ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂಬುದಾಗಿ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *