– ಕೊಲೆ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸಿದ ಪೊಲೀಸ್
ಬೆಂಗಳೂರು: ಸಿಲಿಕಾನ್ ಸಿಟಿಯ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿಯಲ್ಲಿ ಕಳೆದ ಮಾರ್ಚ್ 10 ರಂದು ಬೈಕಿನಲ್ಲಿ ಹೋಗುತ್ತಿದ್ದ ಉಮಾಶಂಕರ್ ಅನ್ನೋರಿಗೆ ಕಾರೊಂದು ಹಿಟ್ ಅಂಡ್ ರನ್ ಮಾಡಿ ಎಸ್ಕೇಪ್ ಆಗಿತ್ತು.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಉಮಾಶಂಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸ್ಥಳೀಯರು ಕೂಡ ಅದು ಹಿಟ್ ಅಂಡ್ ರನ್ ಎಂದೇ ನಂಬಿದ್ದರು. ಆದರೆ ವಿಷಯ ತಿಳಿದು ಸ್ಥಳಕ್ಕೆ ಬಂದ ಬಾಗಲೂರು ಪೊಲೀಸರಿಗೆ ಆ ಅಪಘಾತ ಬಗ್ಗೆ ಹಲವು ಅನುಮಾನಗಳು ಕಾಡಿದ್ದವು. ಸಾವನ್ನಪ್ಪಿದ್ದ ಉಮಾಶಂಕರ್ ಮೈ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಗುರುತುಗಳು ಪತ್ತೆಯಾಗಿದ್ದವು.
Advertisement
Advertisement
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಬಾಗಲೂರು ಪೊಲೀಸರಿಗೆ ಅಪಘಾತವಾದ ದಿನ ಉಮಾಶಂಕರ್ ಬೈಕ್ ಹಿಂದೆ ಅನುಮಾನಸ್ಪದ ಕಾರೊಂದು ಪಾಸ್ ಆಗಿರೋ ಸಿಸಿಟಿವಿ ದೃಶ್ಯ ಪತ್ತೆಯಾಗಿತ್ತು. ಬೈಕ್ ಹಿಂದೆ ಪಾಸ್ ಆದ ಆ ಕಾರಿನ ಡಿಟೇಲ್ಸ್ ಕಲೆ ಹಾಕಿದಾಗ ಅದು ರೌಡಿಶೀಟರ್ ರವಿ ಅಲಿಯಾಸ್ ಕಮ್ರಾನ್ ರವಿ ಕಾರು ಎನ್ನುವುದು ಗೊತ್ತಾಗಿತ್ತು. ಇದಕ್ಕೆ ಪೂರಕವೆಂಬಂತೆ ರೌಡಿಶೀಟರ್ ರವಿ ಮತ್ತು ಸಾವನ್ನಪ್ಪಿದ್ದ ಉಮಾಶಂಕರ್‍ಗೂ ಹಳೇ ವೈಷಮ್ಯವಿರುವುದು ತಿಳಿದು ಬಂದಿತ್ತು.
Advertisement
Advertisement
ಅಂದು ಅಪಘಾತವಾದ ದಿನ ಉಮಾಶಂಕರ್ ಬೈಕಿನಲ್ಲಿ ಹೋಗುತ್ತಿರುತ್ತಾರೆ. ಆದರೆ ಹಿಂಬದಿಯಿಂದ ಕಾರಿನಲ್ಲಿ ಬಂದ ರವಿ ಉಮಾಶಂಕರ್ ಅವರ ಬೈಕಿಗೆ ಉದ್ದೇಶಪೂರ್ವಕವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಆದರೆ ಕೆಳಗೆ ಬಿದ್ದ ಉಮಾಶಂಕರ್ ಸತ್ತಿರಲ್ಲ. ಆಗ ಮತ್ತೆ ಬಂದ ರವಿ ಮಾರಕಾಸ್ತ್ರಗಳಿಂದ ಉಮಾಶಂಕರ್ ಅವರನ್ನು ಕೊಚ್ಚಿ ಕೊಲೆ ಮಾಡಿ ಇದು ಅಪಘಾತ ಎಂದು ಬಿಂಬಿಸಿರುತ್ತಾನೆ. ಆದರೆ ಸಿಸಿಟಿವಿ ಕೊಟ್ಟ ಸುಳಿವಿನಿಂದ ನಿಜವಾದ ಸತ್ಯ ಬಯಲಾಗಿದೆ.
ಇಂದು ಬೆಳಗಿನ ಜಾವ ರೌಡಿಶೀಟರ್ ಕಮ್ರಾನ್ ರವಿ ಕೊಗಿಲು ಕ್ರಾಸ್ ಬಳಿ ಓಡಾಡುತ್ತಿರುವ ವಿಚಾರ ತಿಳಿದ ಪೊಲೀಸರು ರವಿ ಬಂಧನಕ್ಕೆ ಬಲೆಬಿಸಿದ್ದರು. ಆದರೆ ಪೊಲೀಸರು ಬಂದಿರೋ ವಿಚಾರ ತಿಳಿದ ರವಿ, ಇಬ್ಬರು ಪೊಲೀಸ್ ಪೇದೆಗಳ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗೋಕೆ ಯತ್ನಿಸಿದ್ದ. ಈ ವೇಳೆ ಅಲರ್ಟ್ ಆದ ಬಾಗಲೂರು ಪೊಲೀಸ್ ಇನ್ಸ್ ಪೆಕ್ಟರ್ ರಾಮಮೂರ್ತಿ, ಕೊಲೆ ಆರೋಪಿ ರವಿ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.