ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಉತ್ತರ ಭಾರತದಲ್ಲಿ ಹೊತ್ತಿಕೊಂಡಿದ್ದ ಪ್ರತಿಭಟನೆಯ ಕಿಚ್ಚು, ಇದೀಗ ಬೆಂಗಳೂರಿಗೂ ವ್ಯಾಪಿಸಿದೆ.
ಅತಿಸೂಕ್ಷ್ಮ ಪ್ರದೇಶವಾಗಿರುವ ಗೋರಿಪಾಳ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಫುಲ್ ಅಲರ್ಟ್ ಆಗಿದೆ. ಗೋರಿಪಾಳ್ಯದ ಪ್ರಮುಖ ಸರ್ಕಲ್ ಆಗಿರುವ ಸಂಗಮ ಸರ್ಕಲ್ ನಲ್ಲಿ ಒಂದು ಹೊಯ್ಸಳ, ಒಂದು ಕೆಎಸ್ ಆರ್ ಪಿ ವಾಹನದ ಜೊತೆಗೆ 30ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.
ಗೋರಿಪಾಳ್ಯದ ಒಟ್ಟು 15 ಪಾಯಿಂಟ್ ಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಅನುಮಾನಾಸ್ಪದವಾಗಿ ಓಡಾಡುವ, ಗುಂಪು ಕಟ್ಟಿಕೊಂಡು ಓಡಾಡುವವರನ್ನ ವಶಕ್ಕೆ ಪಡೆಯಲಿದ್ದಾರೆ. ಸದ್ಯ ಇಲ್ಲಿ ಸಹಜ ಸ್ಥಿತಿ ಇದ್ದು, ಎಂದಿನಂತೆ ಬಸ್, ಆಟೋ ಸಂಚಾರ ಆರಂಭವಾಗಿದೆ. ಹೋಟೆಲ್, ಬೀದಿ ಬದಿ ಅಂಗಡಿಗಳಲ್ಲಿ ಗುಂಪುಕಟ್ಟಿಕೊಂಡು ಕೂರೋದಕ್ಕೆ ಪೊಲೀಸರು ಅವಕಾಶವನ್ನ ನಿರಾಕರಿಸಿದ್ದಾರೆ.
ಇತ್ತ ನಗರದ ಟೌನ್ ಹಾಲ್ ಗಿಂದು ಖಾಕಿ ಸರ್ಪಗಾವಲು ಹಾಕಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ 5 ಗಂಟೆಗೂ ಹೆಚ್ಚು ಕಾಲ ಬೃಹತ್ ಪ್ರತಿಭಟನೆ ನಡೆಯಿತು. ಇದರ ಪರಿಣಾಮ ಇಂದು ಟೌನ್ ಹಾಲ್ ಸಂಪರ್ಕ ನೀಡುವ ಎಲ್ಲ ರಸ್ತೆಗಳಿಗೂ ಪೊಲೀಸರ ನಿಯೋಜನೆ ಮಾಡಿದ್ದು, ಪ್ರತಿಭಟನೆಗಾಗಿ ಬಂದವರನ್ನ ವಶಕ್ಕೆ ಪಡೆಯಲು ಪೊಲೀಸರು ಸಜ್ಜಾಗಿದ್ದಾರೆ.
ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಭದ್ರತೆಗೆ ಪೊಲೀಸ್ ಪಡೆ ಸಜ್ಜಾಗಿದೆ. ಇಂದು ಶುಕ್ರವಾರವಾಗಿದ್ದು, ಸಾಮೂಹಿಕ ಪ್ರಾರ್ಥನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಂತೆ ಸಾಕಷ್ಟು ಎಚ್ಚರ ವಹಿಸಲಾಗಿದೆ.