ಬೆಂಗಳೂರು: ದೇಶಾದ್ಯಂತ ನಿಷೇಧಗೊಂಡಿರುವ ಕ್ಯಾಟ್ ಫಿಶ್ ಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಮೇಲೆ ಇಂದು ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ಬೈಲಾನರಸಾಪುರ ಹಾಗು ಎನ್.ಹೊಸಹಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ತಾಲೂಕು ತಹಶೀಲ್ದಾರ್, ಮೀನುಗಾರಿಕೆ ಇಲಾಖೆ ಹಾಗೂ ನಂದಗುಡಿ ಪೋಲಿಸ್ ಇಲಾಖೆಯ ಅಧಿಕಾರಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
Advertisement
Advertisement
ಗ್ರಾಮಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಎರಡು ತಂಡಗಳಾಗಿ 2 ಜೆಸಿಬಿಗಳ ಮೂಲಕ ಕ್ಯಾಟ್ ಫಿಶ್ ಹೊಂಡಗಳನ್ನು ತೆರವು ಕಾರ್ಯಚರಣೆ ನಡೆಸಿದರು. ಈ ಹಿಂದೆಯೂ ಸಹ ಜಿಲ್ಲಾ ಎಸ್ಪಿ ರವಿ ಡಿಚನ್ನಣ್ಣನವರ್ ಅವರ ನೇತೃತ್ವದಲ್ಲಿ ತೆರವುಗೊಳಿಸಿದ್ದರೂ ಸಹ ಮತ್ತೆ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಪ್ರಾರಂಭಿಸಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ದಾಳಿ ನಡೆಸಿ ಹೊಂಡಗಳನ್ನು ಧ್ವಂಸಗೊಳಿಸಿದ್ದಾರೆ.
Advertisement
ಇಂದು ದಿನಪೂರ್ತಿ ಅಧಿಕಾರಿಗಳ ತಂಡ ತೆರವು ಕಾರ್ಯಚರಣೆ ಮಾಡಿ ಎರಡು ಗ್ರಾಮಗಳಲ್ಲಿ ಸಂಪೂರ್ಣ ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಿದ್ದಾರೆ. ಕ್ಯಾಟ್ ಫಿಶ್ ಸಾಕಾಣಿಕೆ ಹಾಗೂ ಹೊಂಡಗಳ ಜಾಗದ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Advertisement
ಕ್ಯಾಟ್ ಫಿಶ್ ಅಪಾಯವೇಕೆ?
ಕ್ಯಾಟ್ ಫಿಶ್ ಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ.
ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ದಷ್ಟ ಪುಷ್ಟವಾಗಿ ಬಳೆದ ಪರಿಣಾಮ ಮೀನಿನಲ್ಲಿ ಮುಳ್ಳು ಕಮ್ಮಿ ಇರುತ್ತದೆ. ಈ ಕಾರಣಕ್ಕೆ ಜನರು ಇದನ್ನು ಹೆಚ್ಚು ತಿನ್ನ ಇಷ್ಟಪಡುತ್ತಾರೆ. ಆದರೆ ಇದನ್ನು ತಿಂದರೆ ರಕ್ತ ಹೆಪ್ಪುಗಟ್ಟಿ ಹೃದಯ ಸಂಬಂಧಿ ಖಾಯಿಲೆ ಬರುತ್ತದೆ. ಮೀನುಗಾರಿಕಾ ಇಲಾಖೆಯ ಅಧ್ಯಯನದಲ್ಲಿ ಈ ಅಂಶಗಳು ದೃಢಪಟ್ಟಿರುವುದರಿಂದ ಈ ಮೀನನ್ನು ಭಾರತದಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ.